ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಕುಟುಂಬ ಸಹಿತವಾಗಿ ಭೇಟಿ ನೀಡಿದ್ದಾರೆ. ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ , ಮಗಳು ರಮಿಣಿ , ಅಳಿಯ ರಾಜೀವ್ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದ್ದಾರೆ.
ಈ ಸಂದರ್ಭ ಅವರ ಆಸ್ತಿ ಅಟ್ಯಾಚ್ ಗೆ ಕೋರ್ಟ್ ಆದೇಶ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ 150 ಆಸ್ತಿಗಳನ್ನು ಸಿಬಿಐ ಅವರು ಮುಟ್ಟುಗೋಲು ಹಾಕಿಕೊಂಡಿದ್ದರು. ಅದರಲ್ಲಿ 80ಕ್ಕೂ ಹೆಚ್ಚು ಆಸ್ತಿಗಳನ್ನು ಕೋರ್ಟ್ ಸೋಮವಾರ ಬಿಡುಗಡೆ ಮಾಡಿದೆ. ಉಳಿದ 72 ಆಸ್ತಿಗಳು ಕೇಸ್ ಇತ್ಯರ್ಥ ಆದ ಮೇಲೆ ಪರಿಹಾರ ಆಗುತ್ತದೆ. ದೇವರ ಮತ್ತು ಮಂಜುನಾಥನ ಕೃಪೆ ನನಗಿದೆ. ನನಗೆ ನ್ಯಾಯ ವ್ಯವಸ್ಥೆ ಮೇಲೆ ಮೊದಲಿನಿಂದಲೂ ನಂಬಿಕೆ ಇತ್ತು. ಸೋಮವಾರ 80ಕ್ಕೂ ಹೆಚ್ಚು ಆಸ್ತಿಗಳ ಬಿಡುಗಡೆಗೆ ಮಂಜುನಾಥನ ಆಶೀರ್ವಾದ ದೊರೆತಿದೆ. 2009ರ ಪೂರ್ವದಲ್ಲಿ ಆಸ್ತಿಗಳನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿತ್ತು. ಅದನ್ನ ಕೋರ್ಟ್ ಬಿಡುಗಡೆ ಮಾಡಿದೆ. ಮೊಮ್ಮಗಳ ಅಕ್ಷರಾಭ್ಯಾಸಕ್ಕೆ ಶೃಂಗೇರಿ ಕ್ಷೇತ್ರಕ್ಕೆ ಬಂದಿದ್ದೆ, ಧರ್ಮಸ್ಥಳಕ್ಕೂ ಬರಲು ಇತ್ತು. ಹೀಗಾಗಿ ಭೇಟಿ ನೀಡಿದ್ದೇನೆ. ಮಂಜುನಾಥನ ಆಶೀರ್ವಾದ ಮತ್ತು ತಾಯಿಯ ಆಶೀರ್ವಾದ ನನಗೆ ಇದೆ. ನಾನು ನ್ಯಾಯ ಮಾರ್ಗದಲ್ಲಿ ಬದುಕಿದ್ದೇನೆ, ಹಾಗಾಗಿ ಮಂಜುನಾಥ ನ್ಯಾಯ ಕೊಡುತ್ತಾನೆ ಎಂಬ ನಂಬಿಕೆ ಇದೆ. ಆರು ವರ್ಷಗಳಿಂದ ಧರ್ಮಸ್ಥಳ ಬರಲು ಆಗಿರಲಿಲ್ಲ, ಈಗ ಕುಟುಂಬ ಸಮೇತ ಬಂದಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.