ಚಿತ್ರದುರ್ಗ: ಬೆಂಗಳೂರು: ಪತಿಯ ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಗೀಳು ಪತ್ನಿಯ ಸಾವಿನೊಂದಿಗೆ ಅಂತ್ಯಗೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಬೆಟ್ಟಿಂಗ್ ನಲ್ಲಿ ಹಣ ತೊಡಗಿಸುವ ಸಲುವಾಗಿ ಪತಿ 1.5 ಕೋಟಿಗೂ ಹೆಚ್ಚು ಸಾಲ ಮಾಡಿದ್ದು ಸಾಲ ನೀಡಿದವರು ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ಮಹಿಳೆ ಡೆತ್ ನೋಟ್ ನಲ್ಲಿ ತಿಳಿಸಿದ್ದಾಳೆ.
ಹೊಸದುರ್ಗದ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ದರ್ಶನ್ ಬಾಬು ಎಂಬವರ ಪತ್ನಿ ರಂಜಿತಾ(24) ಆತ್ಮಹತ್ಯೆಗೆ ಶರಣಾದ ಮಹಿಳೆ. ಹೊಳಲ್ಕೆರೆಯ ಆಕೆಯ ಮನೆಯ ಬೆಡ್ ರೂಂನಲ್ಲಿ ಮಾರ್ಚ್ 19ರಂದು ಆಕೆಯ ಮೃತದೇಹ ಪತ್ತೆಯಾಗಿತ್ತು. ತನ್ನ ಈ ನಿರ್ಧಾರಕ್ಕೆ ಸಾಲ ನೀಡಿದ ವ್ಯಕ್ತಿಯೇ ಕಾರಣ ಎಂದು ಆಕೆ ತಿಳಿಸಿದ್ದಾಳೆ. ಪ್ರಕರಣಕ್ಕ ಸಂಬಂಧಿಸಿ ರಂಜಿತಾ ತಂದೆ ವೆಂಕಟೇಶ್ ಎಂಬವರು ತನ್ನ ಅಳಿಯ ದರ್ಶನ್ ಗೆ ಕಾನೂನುಬಾಹಿರವಾಗಿ ಸಾಲ ನೀಡಿರುವ 13 ಮಂದಿಯ ವಿರುದ್ಧ ದೂರು ನೀಡಿದ್ದಾರೆ.
ಪತಿ ದರ್ಶನ್ ಮತ್ತು ತನಗೆ ಸಾಲ ನೀಡಿದವರು ಬಹಳ ಕಿರುಕುಳ ನೀಡುತ್ತಿದ್ದರು ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಮೃತ ರಂಜಿತಾ ಎಂದು ಸುಸೈಡ್ ನೋಟಿನಲ್ಲಿ ತಿಳಿಸಿದ್ದಾರೆ. ದಂಪತಿಗೆ 2 ವರ್ಷದ ಪುತ್ರನಿದ್ದಾನೆ.
ಇನ್ನು ವೆಂಕಟೇಶ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 306 ಅಡಿ 13 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶಿವು, ಗಿರೀಶ್ ಮತ್ತು ವೆಂಕಟೇಶ್ ಬಂಧಿತರು. ಇನ್ನುಳಿದವರು ನಾಪತ್ತೆಯಾಗಿದ್ದು ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.