main logo

ಹಾಸ್ಯವೂ ಅಪಹಾಸ್ಯವೂ

ಹಾಸ್ಯವೂ ಅಪಹಾಸ್ಯವೂ

ನಗು ಪ್ರತಿಯೊಬ್ಬ ವ್ಯಕ್ತಿಗೂ ಅತ್ಯವಶ್ಯವಾದುದು. ಈ ನಗುವಿಗಾಗಿ ಬಹಳಷ್ಟು ಸರ್ಕಸ್ ಮಾಡುತ್ತಲೇ ಇರುತ್ತೇವೆ ಹಾಗೂ ಕೆಲವೊಮ್ಮೆ ಒತ್ತಾಯಪೂರ್ವಕ ನಗೆಯ ಮುಖವಾಡ ಮುಖದ ತುಂಬೆಲ್ಲ ಹರಡಿಕೊಂಡು ಇದ್ದುಬಿಡುತ್ತೇವೆ. ಇನ್ನೂ ಕೆಲವರು “ಛೇ! ಯಾರಾದ್ರೂ ಒಂದು ಹಾಸ್ಯ ಮಾಡಿದರೆ ಒಮ್ಮೆ ಮನ:ಪೂರ್ವಕ ನಕ್ಕುಬಿಡಬಹುದಿತ್ತು” ಎಂದೂ “ಎಷ್ಟು ಹಾಸ್ಯ ಮಾಡಿದರೂ ನಗು ಬರುತ್ತಿಲ್ಲ” ಎಂದು ಗೊಣಗುವವರೂ ಇದ್ದಾರೆ. ಹಾಗಿದ್ದರೆ ನಗುವಿಗೆ ಹಾಸ್ಯ ಮುಖ್ಯವೇ ಎಂದು ಕೇಳಿದರೆ ಬಹಳಷ್ಟು ಸಲ ಹೌದೆನಿಸುತ್ತದೆ. ಉದಾಹರಣೆಗೆ ನಿಮ್ಮ ಎದುರಿಗಿದ್ದವರು ಬಹಳ ನೋವಿನಲ್ಲೋ ಅಥವಾ ಖಿನ್ನ ಮನಸ್ಕರಾಗಿಯೋ ಇದ್ದಾರೆಂದುಕೊಳ್ಳಿ. ತತ್ ಕ್ಷಣಕ್ಕೆ ಹೊಳೆದ ಹಾಸ್ಯವೊಂದನ್ನು ಹಾಯಿಸಿದರೆ ಆ ದು:ಖದಲ್ಲೂ ನಗುವುದನ್ನು ಗಮನಿಸಿರಬಹುದು. ಹಾಗಾದರೆ ಹಾಸ್ಯವೆಂದರೆ ಕೊಂಚ ಕ್ಷಣ ನೋವನ್ನು ಮರೆಸುವ ಮದ್ದೆಂದು ಹೇಳಬಹುದಲ್ಲವೇ!

ಹೇಗಿರಬೇಕು ಹಾಸ್ಯ!

ಹಾಸ್ಯವೆಂಬ ಮುಲಾಮು ನೋವನ್ನು ಮರೆಯಿಸುವುದೇನೋ ಸರಿ, ಆದರೆ ತುಂಬಾ ಸಲ ಈ ಹಾಸ್ಯ ಹೇಗಿರಬೇಕೆಂಬ ಗೊಂದಲದಲ್ಲೇ ನಗುವನ್ನು ಮರೆತುಬಿಡುತ್ತೇವೆ. ಹಾಸ್ಯವೆಂದರೆ ಮನಸನ್ನು ಮುದಗೊಳಿಸುವುದೆಂಬ ವ್ಯಾಖ್ಯಾನವಿದ್ದು ಮಾಡುವ ಹಾಸ್ಯ ಇತರರ ಮನಸನ್ನು ನೋಯಿಸಬಾರದು. ಮಾಡುವ ಹಾಸ್ಯ ಯಾರ ವೈಯಕ್ತಿಕ ಬದುಕಿಗೂ ಸಂಬಂಧಪಡದೆಯೇ ಪ್ರಸ್ತುತ ವಿದ್ಯಮಾನಗಳನ್ನು ಅವಲಂಬಿಸಿದ್ದರೆಯಷ್ಟೇ ಇದು ಸಾಧ್ಯ. ಹಾಸ್ಯದೊಳಗೆ ಪ್ರವೇಶಿಸುವ ನಾವು “ಹೌದು ಇದು ಸರಿಯಾಗಿದೆ” ಎನ್ನುವಂತಿರಬೇಕೇ ಹೊರತು “ಯಾಕೋ ಅತಿಯಾಯಿತು” ಎಂಬಂತಿರಬಾರದು. ಆದುದರಿಂದ ಹಾಸ್ಯ ಮಾಡುವವರಿಗೂ ಗಂಭೀರ ವಿಷಯವನ್ನಿಟ್ಟು ತಿಳಿಯಾಗಿ ಪರಿಸ್ಥಿತಿ ವಿವರಿಸುವ ಚಾಕಚಕ್ಯತೆ ಇರಲೇಬೇಕು ಮತ್ತು ಇದನ್ನು ಎಷ್ಟೋ ಮಂದಿ ಸಮರ್ಥವಾಗಿ ನಿಭಾಯಿಸಿದ್ದಾರೆ.

ಅಪಹಾಸ್ಯ ಹಾಸ್ಯವಲ್ಲ

ಹಾಸ್ಯದೊಡನೆ ಕೇಳಿಬರುವ ಇನ್ನೆರಡು ಪದಗಳೆಂದರೆ ಪರಿಹಾಸ್ಯ ಮತ್ತು ಅಪಹಾಸ್ಯ. ಪರಿಹಾಸ್ಯವೆಂದರೆ ಮನಸನ್ನು ಪ್ರಶಾಂತವನ್ನಾಗಿಸುವ ಮಾತುಗಳೆಂಬ ಅರ್ಥವಿದ್ದು ಇದು ಅಷ್ಟು ಗಂಭೀರವಾದುದಲ್ಲ ಆದರೆ ಇದರ ಜೊತೆಗೇ ಬರುವ ಅಪಹಾಸ್ಯ ಹಾಗಲ್ಲ. ಸದಾಕಾಲ ಇನ್ನೊಬ್ಬರನ್ನೂ ಅವರ ಪರಿಸ್ಥಿತಿಯನ್ನೂ ಮತ್ತು ವೈಯಕ್ತಿಕ ಬದುಕನ್ನೂ ಕೇಂದ್ರೀಕರಿಸಿ ಮೂರನೆಯವರಲ್ಲಿ ಹೇಳಿ ಕುಹಕವಾಡುವುದು ಅಪಹಾಸ್ಯವೆನ್ನಿಸಿಕೊಳ್ಳುತ್ತದೆ. ಇಲ್ಲಿ ವಿಷಯಕ್ಕಿಂತಲೂ ಯಾರದ್ದೋ ಬದುಕಿನ ಸೋಲು ಅಥವಾ ಹತಾಶೆ ಹಾಸ್ಯದ ಬಂಡವಾಳವಾಗಿರುತ್ತದೆ. ಇಂತಹವರನ್ನೇ ವಿಘ್ನಸಂತೋಷಿಗಳೆಂದು ಗುರುತಿಸಲಾಗುತ್ತದೆ ಕೂಡಾ. ಇತರರ ತಪ್ಪುಗಳನ್ನೇ ಬೊಟ್ಟು ಮಾಡಿ ತೋರಿಸುತ್ತಾ ಗೇಲಿ ಮಾಡುವುದು ಆ ಕ್ಷಣಕ್ಕೆ ಅದೇ ವರ್ಗಕ್ಕೆ ಸೇರಿದವರಿಗೆ ನಗು ತರಿಸಬಹುದಾದರೂ ಒಂದು ರೀತಿಯ ಅಧಿಕಪ್ರಸಂಗವೆನ್ನಿಸಿಕೊಳ್ಳುತ್ತದೆಯೇ ಹೊರತು ಮನಸನ್ನು ಪ್ರಸನ್ನವಾಗಿಡುವುದಕ್ಕೆ ಸಹಕರಿಸದೆಯೇ ಇನ್ನಷ್ಟು ತಾತ್ಸಾರ ಭಾವವನ್ನು ಹುಟ್ಟಿಸುತ್ತದೆ. ಹಾವಭಾವ, ಚಲನವಲನಗಳನ್ನು ಕೇಂದ್ರೀಕರಿಸಿ ಮಾಡಿದರೆ ಹಾಸ್ಯವಾಗುತ್ತದೆ ಹೊರತು ಅವುಗಳ ವಿಡಂಬನೆ ಅಪಹಾಸ್ಯವಾಗಿ ಕಾಣುವುದರಲ್ಲಿ ಸಂಶಯವಿಲ್ಲ.

ಹಾಸ್ಯ ಸುಲಭವಲ್ಲ

ಹಾಸ್ಯವೆಂದರೆ ಅಪಹಾಸ್ಯದಷ್ಟು ಸುಲಭವಲ್ಲ ಮತ್ತು ಹಾಸ್ಯೋತ್ಪಾದಕ ಬಹಳಷ್ಟು ತಯಾರಿ ಮಾಡಿಕೊಳ್ಳಲೇಬೇಕಾಗುತ್ತದೆ. ನಗುವವರು ಮತ್ತು ನಗಿಸುವವರ ನಡುವಿನ ಸಂಬಂಧ ಗಟ್ಟಿಯಾಗಬೇಕಾದರೆ ನಗಿಸುವವನು ತನ್ನ ನೋವುಗಳನ್ನು ಕಟ್ಟುವ ಹಾಸ್ಯದಲ್ಲಿ ಮರೆಮಾಚಬೇಕಾಗುತ್ತದೆ ಮತ್ತು ನಗುವವರ ಭಾವಗಳನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಪ್ರಸ್ತುತಕ್ಕೆ ಬೇಕಾಗಿರುವ ಹಾಸ್ಯದತ್ತ ಚಿತ್ತವಿರಲಿ ಆದರೆ ಯಾರದ್ದೋ ಬದುಕು ಅಪಹಾಸ್ಯ ಆಗದಿರಲಿ ಅನ್ನೋದು ಆಶಯವಾಗಿರಲಿ.

ಇದು ಒಗ್ಗರಣೆ ವಿಷಯ

ಒಗ್ಗರಣೆಯೆಂದರೆ ಸಾಕು ಉಣಬಡಿಸುವವರಿಗೂ ಉಣ್ಣುವವರಿಗೂ ಎರಡು ವಿಭಿನ್ನ ಅನುಭವವನ್ನು ಕೊಡುವ ಒಂದು ವಿಶೇಷ ಪದ. ಯಾವ ಅಡುಗೆಗೆ ಯಾವುದರ ಒಗ್ಗರಣೆ ರುಚಿ ಕೊಟ್ಟೀತೆಂಬ ಜಾಡು ಹಿಡಿದು ಅದಕ್ಕೆ ತಕ್ಕಂತೆ ಅಡುಗೆಯ ಕೊನೆಗೆ ಚುಂಯ್ಯ್ ಎಂಬ ಸಪ್ಪಳದ ಒಗ್ಗರಣೆ ಬಿಡುವುದು ಅಡುಗೆಯನ್ನು ಪ್ರೀತಿಸುವವರಿಗೆ ಒಂದು ಖುಷಿಯಾದರೆ ಇನ್ನು ತಿನ್ನುವವರಿಗೆ ಒಗ್ಗರಣೆಗೆ ಹಾಕಿದ ಪದಾರ್ಥಗಳನ್ನು ಮೂಗು, ನಾಲಿಗೆಯ ಗ್ರಂಥಿಗಳಲ್ಲಿ ಆಸ್ವಾದಿಸುತ್ತಾ ತಿನ್ನುವುದು ಇನ್ನೊಂದು ಮಜಾ. ಮಾಡಿದಡುಗೆಯ ಅಷ್ಟೂ ಪ್ರಕ್ರಿಯೆ ಪೂರ್ಣವಾಗುವುದು ಪುಟ್ಟ ಸಟ್ಟುಗದ ಒಗ್ಗರಣೆಯಲ್ಲಿ ಎಂದರೆ ಇಲ್ಲಿ ಹಾಕುವ ಒಗ್ಗರಣೆ ಎಷ್ಟು ಪ್ರಧಾನ ಪಾತ್ರವನ್ನು ವಹಿಸುವುದು ಎಂಬುದು ಸ್ಪಷ್ಟವಾಗುತ್ತೆ ಅಲ್ವೇ ! ಚಠಪಠ ಸಿಡಿಯುವ ಒಗ್ಗರಣೆ ಸೌಟಿಗೆ ಸ್ವಲ್ಪ ನೀರು ಸೋಕಿತೆನ್ನಿ ‘ನನ್ನನ್ನೇಕೆ ಮುಟ್ಟಿದೆ!? ಎನ್ನುವಂತಿರುವ ಚೊಂಯ್ಯೆಂಬ ಆ ಆರ್ತನಾದ ಕಿರಿಕಿರಿಯನ್ನುಂಟು ಮಾಡಿದರೆ ಮಾಡಿದಡುಗೆಗೆ ಬಿದ್ದಾಗ ಪಾಕದೊಳಗೊಂದಾಗಿ ಸೇರಿ ಹೋಗುತ್ತಾ ಚುಂಯ್ಯಿ ಚುಂಯ್ಯಿ ಎಂದು ಸುಮ್ಮನಾಗುವ ಆ ಪ್ರೀತಿ ರಸಾನುಭವವನ್ನು ಕೊಡುವಂತಹದ್ದು.

ಅಡುಗೆಗೆ ಒಗ್ಗರಣೆ ಎಷ್ಟು ಮುಖ್ಯವೋ ! ಹಾಕುವ ಒಗ್ಗರಣೆ ಹೊಂದುವಂತಿರಬೇಕು ಎನ್ನುವುದೂ ಅಷ್ಟೇ ಸತ್ಯ. ಕೆಲವು ಅಡುಗೆಗಳಿಗೆ ಒಗ್ಗರಣೆ ಸಂಪೂರ್ಣ ನಿಷಿದ್ಧ. ಇನ್ನೂ ಕೆಲವು ಅಡುಗೆಗಳು ಒಗ್ಗರಣೆಯಿರದಿದ್ದರೆ ಪೂರ್ಣವಾಗುವುದಿಲ್ಲ. ಖಾರಕ್ಕೂ ಸಿಹಿಗೂ ಅದಕ್ಕೊಪ್ಪುವ ಒಗ್ಗರಣೆಯನ್ನೇ ಹಾಕಬೇಕಲ್ಲದೆ ಬೇಕಾಬಿಟ್ಟಿ ಹಾಕಿದರೆ ಕೆಟ್ಟುಹೋಗುವುದು. ಹೀಗೆ ಪಾಕಶಾಲೆ ಸಂಬಂಧಿ ಒಗ್ಗರಣೆಗೆ ಮನುಷ್ಯ ವರ್ತನೆಯನ್ನು ಹೋಲಿಸುವುದನ್ನು ನಾವು ಕೇಳಿರುತ್ತೇವೆ. ಆ ಅಡುಗೆಯೊಗ್ಗರಣೆಗೂ ಮನುಷ್ಯ ಗುಣಗಳಿಗೂ ಅದೇನು ಸಂಬಂಧವೆಂದು ಕೇಳುವಂತಿಲ್ಲ ಯಾಕೆಂದರೆ ಮಾತಿನೊಗ್ಗರಣೆ ಆ ಒಗ್ಗರಣೆಗಿಂತಲೂ ಜಿಗುಟಾಗಿ, ಒಗರಾಗಿ, ಸಿಡಿಯುವಂತಹ ಗುಣವುಳ್ಳದ್ದು. ಹೇಗೆಂದು ಯೋಚಿಸುವ ಮೊದಲು ಈ ಪ್ರಸಂಗವನ್ನೊಮ್ಮೆ ಅವಲೋಕಿಸೋಣ.

ಇಬ್ಬರು ಅದೇನೋ ಚರ್ಚಿಸುತ್ತಿದ್ದಾರೆಯೆಂದಿಟ್ಟುಕೊಳ್ಳೋಣ. ಇವರಿಬ್ಬರ ನಡುವೆ ಮೂಗು ತೂರಿಸುವ ಪೂರ್ವಾಪರದ ಅರಿವಿಲ್ಲದ ಮೂರನೆಯವನು ಒಗ್ಗರಣೆ ಸಾಮಾಗ್ರಿಯಾಗುತ್ತಾನೆ. ಆತನಿಗೆ ವಿಷಯದ ಅಗತ್ಯವಿಲ್ಲ ಆದರೆ ಸದ್ದೆಬ್ಬಿಸುವ ಕಾತುರವಿರುತ್ತದೆ. ಇಬ್ಬರಿಗೂ ಸಲಹೆಗಳನ್ನು ನೀಡುತ್ತಾನೆ. ಮಾತು ಮತ್ತಷ್ಟು ಇನ್ನಷ್ಟು ವಿಪರೀತಕ್ಕೆ ಹೋಗುವವರೆಗೆ ಕಾದು ಕೊನೆಗೆ ಒಂದೇ ಮಾತಿನಲ್ಲಿ ನುಸುಳಿಕೊಂಡು ಬಿಡುತ್ತಾನೆ. ಇಲ್ಲಿ ಬಹಳಷ್ಟು ಸಲ ಚರ್ಚಿಸಿದವರಿಗಿಂತ ಒಗ್ಗರಣೆ ಹಾಕಿಕೊಟ್ಟವನೇ ಮುಖ್ಯವೆನಿಸಿಕೊಳ್ಳುವುದೂ ಇದೆ. ಕಾರಣವಿಷ್ಟೇ! ಆತನ ಮಾತು ಒಗ್ಗರಣೆಯಂತೆ ಇಬ್ಬರಿಗೂ ಹೊಂದಿಕೊಂಡು ಅಡುಗೆಯಲ್ಲಿ ಒಗ್ಗರಣೆ ಸೇರಿಕೊಳ್ಳುವಂತೆ ಇರುವುದು.

ನಮ್ಮ ವ್ಯಕ್ತಿತ್ವ ರುಚಿಯಾದ ಅಡುಗೆಯಂತಾಗಬೇಕಾದರೆ ಆಡುವ ಮಾತಿನ ಒಗ್ಗರಣೆ ಬುದ್ಧಿಯ ಬಗ್ಗೆ ಕೊಂಚ ನಿಗಾ ಹರಿಸೋಣ. ಅಡುಗೆಗೆ ಒಗ್ಗರಣೆಯ ಅಗತ್ಯವಿರಬಹುದು ಆದರೆ ಮಾತಿನಡುಗೆಗೆ ಒಗ್ಗರಣೆ ಮುಖ್ಯವೇನಲ್ಲ. ಹಸಿ ಒಗ್ಗರಣೆಯೋ, ಸೀದ ಒಗ್ಗರಣೆಯೋ ಆಗುವ ಮುನ್ನ ನಡತೆಯೆಂಬ ಅಡುಗೆಯು ಪರಿಪೂರ್ಣವಾಗಲಿ ಯಾಕೆಂದರೆ ಅರ್ಧ ಬೆಂದ ಅಡುಗೆಗಳಿಗೆ ಒಗ್ಗರಣೆ ನಿಷಿದ್ಧ ಹಾಗೆಂದ ಮಾತ್ರಕ್ಕೆ ಬೆಂದಡುಗೆಗಳೆಲ್ಲವೂ ಒಗ್ಗರಣೆಯನ್ನು ಬಯಸದು. ಒಟ್ಟಾರೆಯಾಗಿ ಒಗ್ಗರಣೆ ಪ್ರಸ್ತುತದಲ್ಲಿ ಒಗ್ಗರಣೆ ಕಮಟು ಘಾಟಾಗದಂತೆ ಬದುಕಿನೊಂದಿಗೆ ಮಿಳಿತಗೊಳಿಸಿ ಸಾಗುವುದು ನಮಗೇ ಬಿಟ್ಟಿರುವಂತಹದ್ದು.

ಆಸಕ್ತಿಗೆ ತಕ್ಕಂತಿರಲಿ ಮಾತು

ಆತ್ಮೀಯರ ಮನೆಗೆ ಭೇಟಿ ಕೊಟ್ಟಿದ್ದೆ. ಹೊರಗೆ ಸೋಫಾದಲ್ಲಿ ಅಜ್ಜಿ-ಮೊಮ್ಮಗ ಕುಳಿತು ಅದೇನೋ ಮಾತಿಗಿಳಿದಿದ್ದರು. ಏನಿರಬಹುದು? ಎಂದು ಕಿವಿಯಾನಿಸಿದೆ. ‘ಇದು ಬೇಡ ಮಾರಾಯ ಅದೊಂದು ಕೀರ್ತನೆ ಇತ್ತಲ್ಲ ಅದನ್ನು ಹಾಕು’ ಅಜ್ಜಿ ಹೇಳ್ತಿದ್ರೆ, ‘ಏ ॒ಹೋಗಜ್ಜಿ ನೀನು ಬರೀ ಬೋರ್, ಸ್ವಲ್ಪ ಅಪ್ಡೇಟ್ ಆಗು’ ಮೊಮ್ಮಗನ ಹಿತೋಪದೇಶ. ‘ಬಿಡಪ್ಪಾ ನಾನು ಎದ್ದು ಹೋಗ್ತೇನೆ ಇಂತಹ ಹಾಡುಗಳು ನಂಗೆ ಸರಿಯಾಗಲ್ಲ’ ಎದ್ದ ಅಜ್ಜಿಯ ಕೈ ಹಿಡಿದು ಹುಡುಗ ಕುಳ್ಳಿರಿಸಿದಾಗ ನಗು ಬಂತು. ‘ಅಜ್ಜಿ ಇಲ್ನೋಡು, ಈ ಹಾಡಿನ ಮೇಕಿಂಗ್ ನಾನು ಹೇಳ್ತೇನೆ ನಿಂಗೆ, ಆವಾಗ ಅರ್ಥ ಆಗುತ್ತೆ’ ಅಂದವ್ನೇ ಏನೇನೋ ಬಡಬಡಾಯಿಸ ತೊಡಗಿದಾಗ ಅಜ್ಜಿ ಮಾತ್ರ ಬಹಳ ಕಷ್ಟದಿಂದ ಕೇಳುತ್ತಿದ್ದಳೋ ಅಥವಾ ಆಕೆಯದ್ದೇ ಲೋಕದಲ್ಲಿದ್ದಳೋ ತಿಳಿಯದು. ಅಜ್ಜಿಯ ಆಸಕ್ತಿಗಳೇ ಬೇರೆ, ಪುಳ್ಳಿಯದ್ದೇ ಬೇರೆ. ಇದನ್ನು ತಲೆಮಾರಿ ನಂತರವೆಂದು ಹೆಸರಿಸುವಂತಿಲ್ಲ ಯಾಕೆಂದರೆ ಇದು ಆಸಕ್ತಿ ಸಂಬಂಧಿಸಿದ್ದು.

ಈ ಆಸಕ್ತಿಯ ವಿಷಯ ಕೇವಲ ಅಜ್ಜಿ-ಪುಳ್ಳಿಯರದ್ದಲ್ಲ. ದಿನನಿತ್ಯದಲ್ಲಿ ಬಹಳಷ್ಟು ಸಲ ನಾವು ಇಂತಹ ಸನ್ನಿವೇಶವನ್ನು ಎದುರಿಸುತ್ತೇವೆ. ಕೆಲವೊಮ್ಮೆ ಅಜ್ಜಿಯಂತಾಗುತ್ತೇವೆಯೆನ್ನುವುದು ಒಂದಾದರೆ ಮೊಮ್ಮಗನಂತೆ ಎದುರಿದ್ದವರ ಆಸಕ್ತಿಯನ್ನು ಗಮನಿಸದೆಯೇ ನಮ್ಮ ಇಷ್ಟಕ್ಕೆ, ಅಭಿರುಚಿಗೆ ತಕ್ಕಂತೆ ಅವರೂ ಇದ್ದಾರೆಯೆಂದು ಭ್ರಮಿಸಿಕೊಂಡು ನಮ್ಮದೆಲ್ಲವೂ ಅವರ ಮನಸಿಗೆ ಹೊಕ್ಕಬೇಕೆಂದು ಒತ್ತಾಯದಲ್ಲಿ ಕಟ್ಟಿಹಾಕುವುದೂ ಇದೆ. ಉದಾಹರಣೆಗೆ ವಾಣಿಜ್ಯ ಕ್ಷೇತ್ರದಲ್ಲಿ ಆಸಕ್ತಿಯೇ ಇಲ್ಲದವರಲ್ಲಿ ವ್ಯವಹಾರಗಳ ಬಗ್ಗೆ ಹೇಳಿ ಫಲವೇನಿದೆ ಅಥವಾ ವೈಚಾರಿಕತೆಯತ್ತ ಗಮನವಿಲ್ಲದವನಿಗೆ ಆ ಬಗ್ಗೆ ವಿವರಿಸಿದರೇನು ಅರ್ಥವಾದೀತು? ನಮ್ಮೊಳಗಿನ ವಿಷಯಗಳನ್ನು ಕಕ್ಕುತ್ತೇವೆಯೇ ಹೊರತಾಗಿ ಎದುರಿದ್ದವನ ಎದೆ ತಟ್ಟುವುದಿಲ್ಲ. ಇದು ಇಬ್ಬರ ನಡುವಿನ ಸಂಭಾಷಣೆಯ ವಿಷಯವಾದರೆ ಇನ್ನೊಂದಿದೆ ವೇದಿಕೆಗೆ ಸಂಬಂಧಿಸಿದ್ದು. ಕೆಲವರಿಗೆ ಮೈಕ್ ಎಂಬ ಎರಡಕ್ಷರದ ಪದ ಕಿವಿಗೆ ಬಿದ್ದೊಡನೆ ಪರಕಾಯ ಪ್ರವೇಶವಾಗುವುದೂ ಇದೆ. ಇಂತಹ ಆವೇಶದಲ್ಲಿ ಸಮಯ, ಸಂದರ್ಭಗಳೆಲ್ಲವನ್ನೂ ಮರೆತು ಪೇಚಿಗೆ ಸಿಕ್ಕಿಹಾಕಿಕೊಂಡವರ ಅನುಭವಗಳೂ ಕಡಿಮೆಯೇನಿಲ್ಲ. ನಮ್ಮ ಆಸಕ್ತಿಗಳ ಬಗ್ಗೆ ಮಾತನಾಡುವ ಮುನ್ನ ನಮ್ಮೆದುರಿನವರ ಅಭಿರುಚಿ ತಿಳಿದು ಮಾತನಾಡಿದರೆ ಮಾತಿಗೂ ಒಂದು ಅರ್ಥ ಬರಬಹುದೇನೋ!

ಮಾತು ಎಂಬುದು ಸಣ್ಣ ಎರಡಕ್ಷರದ ಪದವಲ್ಲ. ಈ ಮಾತಿನಿಂದ ಮನಸ್ಸನ್ನು ಮುರಿಯಲೂ ಬಹುದು ಕಟ್ಟಲೂ ಬಹುದು. ಆದರೆ ಮುರಿದು ಕಟ್ಟುವ ಅಥವಾ ಕಟ್ಟಿ ಮುರಿವ ಮಾತಿಗಿಂತಲೂ ಸಂಜೀವಿನಿಯಾಗಬಲ್ಲ ಮಾತು ಬಹಳ ಮುಖ್ಯವಾಗುತ್ತದೆ. ‘ಅಯ್ಯೋ ಇವ್ನೊಮ್ಮೆ ಮಾತು ನಿಲ್ಸಿದ್ರೆ ಸಾಕು’ ಅಂಥ ಎದುರಿಗಿದ್ದವರು ಬೈಯ್ದುಕೊಳ್ಳುವ ಮುನ್ನ ಮಾತು ನಿಲ್ಲಿಸಿದರೆ ನಾವು ಕ್ಷೇಮ. ಒಂದೋ ‘ಕಲಿತು ಮಾತನಾಡಬೇಕು ಅಥವಾ ಮಾತನಾಡಿ ಕಲಿಯಬೇಕು’ ಎಂಬುದೊಂದು ಮಾತಿದೆ. ಆದರೆ ಇಲ್ಲಿ ನಮ್ಮ ಆಯ್ಕೆ ಮೊದಲನೆಯದ್ದೇ ಆಗಿರಲಿ. ಯಾಕೆಂದರೆ ಕಲಿತು ಮಾತನಾಡಿದರೆ ಅಭಾಸಗಳು ಕಡಿಮೆ ಆದರೆ ಮಾತನಾಡಿ ಕಲಿತರೆ ಆಡಿದ ಮಾತು ಗಬ್ಬೆಬ್ಬಿಸಿ ಬಿಡುತ್ತದೆ. ಮಾತಿಗೆ ಹಿನ್ನೆಲೆ ನಮ್ಮ ಆಸಕ್ತಿಯಷ್ಟೇ ಆಗಿರುವ ಬದಲಾಗಿ ಎದುರಿಗಿರುವವರ ಅಭಿರುಚಿಗೂ ತಕ್ಕಂತಿರಲಿ ಅಲ್ವೇ.

ಅಕ್ಷತಾರಾಜ್ ಪೆರ್ಲ

Related Articles

Leave a Reply

Your email address will not be published. Required fields are marked *

error: Content is protected !!