Site icon newsroomkannada.com

ಹುಬ್ಬಳ್ಳಿಯಲ್ಲಿ ನಡೆಯಿತು ನೇಹಾ ಮಾದರಿಯ ಮತ್ತೊಂದು ಕೊಲೆ

ಹುಬ್ಬಳ್ಳಿ, ಮೇ 15: ನೇಹಾ ಹಿರೇಮಠ ಕೊಲೆಯ (Neha Hiremath Murder Case) ಕಹಿ ನೆನಪು ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ (Hubballi) ಅಂಥದ್ದೇ ಮತ್ತೊಂದು ಘಟನೆ ನಡೆದಿದೆ. ನಸುಕಿನ ಜಾವ ನಸುನಿದ್ದೆಯಲ್ಲಿದ್ದ ಯುವತಿಯನ್ನು ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಹತ್ಯೆ ಮಾಡಿದ ಭೀಕರ ಘಟನೆಗೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪುರ ಓಣಿ ಸಾಕ್ಷಿಯಾಗಿದೆ. ಮೃತ ಯುವತಿಯನ್ನು ಅಂಜಲಿ ಅಂಬಿಗೇರ (Anjali Ambigera) ಎಂದು ಗುರುತಿಸಲಾಗಿದೆ. ವಿಶ್ವ ಅಲಿಯಾಸ್ ಗಿರೀಶ್ ಎಂಬಾತ ಈ ಯುವತಿಯನ್ನು ಹತ್ಯೆ ಮಾಡಿದ್ದು, ನಂತರ ತಲೆಮರೆಸಿಕೊಂಡಿದ್ದಾನೆ.ನೇಹಾ ಮಾದರಿಯಲ್ಲಿ ಹತ್ಯೆ ಮಾಡುತ್ತೇನೆ ಎಂದು ಅಂಜಲಿ ಅಂಬಿಗೇರಗೆ ವಿಶ್ವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅದರಂತೆಯೇ ಬುಧವಾರ ಬೆಳಗ್ಗೆ 5.30ಕ್ಕೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ. ಮನೆಯವರು ತಡೆಯಲು ಮುಂದಾದರೂ ಬಿಡದೆ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

 

ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ವಿಶ್ವ ಧಮ್ಕಿ ಹಾಕಿದ್ದ. ಅಕಸ್ಮಾತ್ ನೀನು ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಆದ ಹಾಗೆಯೇ ನಿನಗೂ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದ. ಈತನ ವಿರುದ್ಧ ಹಲವು ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾದ ಆರೋಪವೂ ಇದೆ. ಜತೆಗೆ, ಬೈಕ್ ಕಳ್ಳತನದಲ್ಲಿಯೂ ಆರೋಪಿಯಾಗಿದ್ದಾನೆ. ದೂರು ನೀಡಿದ್ದ ಅಜ್ಜಿ: ಮೂಢ ನಂಬಿಕೆ ಎಂದು ಕಳುಹಿಸಿದ್ದ ಪೊಲೀಸರು

ಕ್ರೌರ್ಯದ ಪರಮಾವಧಿ

ಮನೆಗೆ ನುಗ್ಗಿದ ವಿಶ್ವ ಅಂಜಲಿಯನ್ನು ಆಕೆಯ ಅಜ್ಜಿ ಹಾಗೂ ಇಬ್ಬರು ಸಹೋದರಿಯರ ಮುಂದೆಯೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಇರಿದಿದ್ದಾನೆ. ಮೊದಲಿಗೆ ಮನೆಯ ಪಡಸಾಲಿಯಲ್ಲಿ ಅಂಜಲಿಗೆ ಚಾಕು ಹಾಕಿದ ವಿಶ್ವ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಲ್ಲಿಂದ ಅಡುಗೆಯ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕು ಚುಚ್ಚಿದ್ದಾನೆ. ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.

Exit mobile version