Site icon newsroomkannada.com

VIDEO: ‘ಈ ಗುಂಡಿಲೆಡ್ ಬಲ್ಲಿ…’–ಚಂದಿರನಂಗಳದಲ್ಲಿ ಸೇಫ್ ರೂಟ್ ಗಾಗಿ ‘ಪ್ರಗ್ಯಾನ್’ ಹುಡುಕಾಟ!

ಬೆಂಗಳೂರು: ಇಸ್ರೋದ (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ-3ರಲ್ಲಿ (Chandrayaan 3) ಚಂದ್ರನ ನೆಲದ ಮೇಲೆ ಓಡಾಟ ನಡೆಸುತ್ತಿರುವ ಪ್ರಗ್ಯಾನ್ ರೋವರ್ (Pragyan Rover)ಗೆ ಅಲ್ಲಲ್ಲಿ ಹೊಂಡಗಳನ್ನು ಸಿಗುತ್ತಿದ್ದು, ಇದನ್ನು ಪಾರು ಮಾಡಿಕೊಂಡು ಹೋಗುವುದು ಅದರ ಪಾಲಿಗೆ ಸವಾಲಿನ ಕೆಲಸವಾಗಿದೆ.

ಕೆಲ ದಿನಗಳ ಹಿಂದಷ್ಟೇ ದೊಡ್ಡ ಹೊಂಡವನ್ನು 3 ಮೀಟರ್ ದೂರದಿಂದಲೇ ಗುರುತಿಸಿ ಭೂಮಿಯ ನಿಯಂತ್ರಣ ಕೇಂದ್ರದ ಸೂಚನೆಯಂತೆ ಅದನ್ನು ತಪ್ಪಿಸಿಕೊಂಡು ಪಥ ಬದಲಿಸಿದ್ದ ಪ್ರಗ್ಯಾನ್, ಇದೀಗ ಚಂದಿರನ ನೆಲದಲ್ಲಿರುವ ಇನ್ನೊಂದು ಹೊಂಡವನ್ನು ತಪ್ಪಿಸಿಕೊಂಡು ಹೋಗುವ ಪ್ರಯತ್ನದಲ್ಲಿರುವ ವಿಡಿಯೋವನ್ನು ವಿಕ್ರಮ್ ಲ್ಯಾಂಡರ್ (Vikram Lander)ನಲ್ಲಿರುವ ಕೆಮರಾ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ.

ಈ ವಿಡಿಯೋವನ್ನು ಇಸ್ರೋ ತನ್ನ ‘ಎಕ್ಸ್’ (X) (ಹಿಂದೆ ಟ್ವಿಟ್ಟರ್ ಎಂದು ಕರೆಯಲಾಗುತ್ತಿತ್ತು) ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಅದಕ್ಕೊಂದು ಚಂದದ ಬರವನ್ನೂ ನೀಡಿದೆ.

‘ಸುರಕ್ಷಿತ ದಾರಿಯನ್ನು ಹುಡುಕುವ ಪ್ರಯತ್ನದಲ್ಲಿ ರೋವರ್ ರೊಟೇಟ್ ಆಗಿದೆ. ಈ ರೊಟೇಶನನ್ನು ಲ್ಯಾಂಡರ್ ಇಮೇಜರ್ ಕೆಮರಾ ಸೆರೆಹಿಡಿದಿದೆ’

‘ಚಂದಮಾಮನ ಅಂಗಳದಲ್ಲಿ ಮಗವೊಂದು ಖುಷಿಯಿಂದ ಆಡುತ್ತಿರುವಂತೆ ಮತ್ತು ಇದನ್ನು ತಾಯಿ ಮಮತೆಯಿಂದ ವೀಕ್ಷಿಸುತ್ತಿರುವಂತೆ ಅನ್ನಿಸುತ್ತಿದೆ.. ಅಲ್ಲವೇ..!?’ ಎಂದು ‘ಇಸ್ರೋ’ ಬರೆದುಕೊಂಡಿದೆ.

ಇದೇ ವೇಳೆ ಚಂದಿರನ ನೆಲದಲ್ಲಿ ಸಲ್ಫರ್ ಇರುವಿಕೆಯನ್ನು ಪ್ರಗ್ಯಾನ್ ರೋವರ್ ನಲ್ಲಿರುವ ಇನ್ನೊಂದು ಉಪಕರಣ ಪತ್ತೆಹಚ್ಚಿದೆ ಎಂದು ಇಸ್ರೋ ಇಂದು (ಆ.31) ಖಚಿತಪಡಿಸಿದೆ.

Exit mobile version