ಮಂಗಳೂರು: ಉಡುಪಿ ಮತ್ತು ಮಂಗಳೂರಿಗೆ ಮಂಗಳವಾರ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಉಡುಪಿ ಕಾಲೇಜು ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣ ಸಂಬಂಧಿಸಿ ಎಸ್ ಐಟಿ ತನಿಖೆ ಅಗತ್ಯವಿಲ್ಲ ಎಂದಿದ್ದರು. ಡಿವೈಎಸ್ ಪಿ ಮಟ್ಟದ ಅಧಿಕಾರಿಗಳೇ ತನಿಖೆ ನಡೆಸುತ್ತಾರೆ ಎಂದು ಹೇಳಿಕೆ ನೀಡಿದ್ದರು.
ಈ ವಿಷಯ ಕುರಿತು ಕರಾವಳಿಯ ಬಿಜೆಪಿ ಶಾಸಕರು ಸಿಎಂ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಶಾಸಕರ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಎಸ್ಐಟಿ ತನಿಖೆಗೆ ವಹಿಸುವಂತೆ ಆಗ್ರಹಿಸಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಡಾ. ಭರತ್ ಶೆಟ್ಟಿ, ಪ್ರಕರಣವನ್ನು ಎಸ್ಐಟಿಗೆ ವಹಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಎಸ್ಐಟಿ ತನಿಖೆ ಆಗ್ರಹಿಸಿ ಬಿಜೆಪಿ, ಎಂಎಲ್ಎ, ಎಂಎಲ್ಸಿಗಳು ರಾಜ್ಯಪಾಲರನ್ನು ಭೇಟಿಯಾಗುತ್ತೇವೆ. ಕಾಂಗ್ರೆಸ್ ನವರು ವಿಡಿಯೋ ಪ್ರಕರಣವನ್ನು ಮಕ್ಕಳಾಟಿಕೆ ಎಂದು ಹೇಳುತ್ತಾರೆ.
ಹೋಮ್ ಮಿನಿಸ್ಟರ್, ಸಿಎಂ ಕೂಡ ಅದನ್ನೇ ಹೇಳುತ್ತಾರೆ. ಒತ್ತಡ ಇದ್ದ ಹಿನ್ನಲೆಯಲ್ಲಿ ಒಂದು ವಾರ ಬಿಟ್ಟು ಎಫ್ ಐ ಆರ್ ಹಾಕಿದ್ದಾರೆ. ಮಕ್ಕಳಾಟಿಕೆ ಎನ್ನುವವರು ಹೇಗೆ ಸರಿಯಾದ ತನಿಖೆ ಮಾಡಲು ಸಾಧ್ಯ ಎಂದು ಶಾಸಕ ಭರತ್ ಪ್ರಶ್ನಿಸಿದ್ದಾರೆ. ನಮಗೆ ಅಧಿಕಾರಿಗಳ ಬಗ್ಗೆ ಸಂಶಯವಿಲ್ಲ. ಆದರೆ ಆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಪ್ರಕರಣದ ಹಾದಿ ತಪ್ಪಿಸುವ ಸಾಧ್ಯತೆಯಿದೆ. ಅದಕ್ಕಾಗಿ ನಾವು ಎಸ್ ಐ ಟಿ ತನಿಖೆಗೆ ಆಗ್ರಹಿಸುತ್ತೇವೆ ಎಂದರು. ಆಗಸ್ಟ್ 4ರಂದು ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ ಎಂದು ಹೇಳಿದರು.