ಬೆಳ್ತಂಗಡಿ: ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ಆಗ್ರಹ ಸಭೆ-ಜಾಥಾಗಳು ನಡೆಯುತ್ತಿದೆ.
ಈ ನಡುವೆ ನಾಳೆ (ಆ.27) ಆದಿತ್ಯವಾರದಂದು ಹಿಂದು ಸಂಘಟನೆಗಳಾಗಿರುವ ವಿಶ್ವ ಹಿಂದು ಪರಿಷತ್, ಭಜರಂಗದಳ ಧರ್ಮಸ್ಥಳಕ್ಕೆ ಪಾದಯಾತ್ರೆಯನ್ನು ಆಯೋಜಿಸಿದೆ.
ಈ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಸೌಜನ್ಯಳ ತಾಯಿ ಕುಸುಮಾವತಿಯವರಿಗೆ ಆಹ್ವಾನ ಹೋಗಿದ್ದು, ಅವರು ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ವಿಚಾರ ಇದೀಗ ಧರ್ಮಸ್ಥಳ ಮಾತ್ರವಲ್ಲದೇ ಕರಾವಳಿಯಾದ್ಯಂತ ಸಂಚಲನ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಈ ಹಿನ್ನಲೆಯಲ್ಲಿ, ಸೌಜನ್ಯ ತಾಯಿ ಆರೋಪ ಮಾಡುತ್ತಿರುವ ಮೂವರು ಯುವಕರಾದ ಧೀರಜ್ ಕೆಲ್ಲ, ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ಅವರು ನೀಡಿರುವ ಸಂದೇಶವೊಂದು ಭಾರೀ ಕುತೂಹಲ ಮೂಡಿಸಿದೆ.
‘ಸೌಜನ್ಯ ವಿಚಾರದಲ್ಲಿ ನಾವು ಯಾವುದೇ ತಪ್ಪು ಮಾಡಿಲ್ಲ, ನಾಳೆ ನಾವು ಅಣ್ಣಪ್ಪ ಬೆಟ್ಟದ ಸಮೀಪ ಕಾಯುತ್ತಿರುತ್ತೇವೆ. ನಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲವೆಂದು ಪ್ರಮಾಣ ಮಾಡಲು ಸಿದ್ಧ’ ಎಂಬ ಒಕ್ಕಣೆಯಿರುವ ವಾಟ್ಸ್ಯಾಪ್ ಸಂದೇಶವನ್ನು ಕಳಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಮತ್ತು ಈ ಸಂದೇಶದ ಕುರಿತು ಮಲ್ಲಿಕ್ ಜೈನ್ ಖಚಿತಪಡಿಸಿದ್ದಾರೆ.
ವಾಟ್ಸ್ಯಾಪ್ ಸಂದೇಶದಲ್ಲೇನಿದೆ?
‘ನಾಳೆ ದಿ.27.08.2023ರ ಭಾನುವಾರದಂದು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಪಾದಯಾತ್ರೆಯೊಂದನ್ನು ಆಯೋಜಿಸಿದ್ದು, ತಾವು ಈ ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ತಿಳಿದುಬಂದಿರುತ್ತದೆ. ಪ್ರಕರಣ ನಡೆದು ಸುಮಾರು ಒಂದು ವರ್ಷಗಳ ನಂತರ ನಮ್ಮ ಮೂರು ಜನರನ್ನು ಉಲ್ಲೇಖಿಸಿ ಆರೋಪಗಳನ್ನು ಮಾಡಿರುತ್ತೀರಿ. ವಿವಿಧ ತನಿಖೆಗಳ ನಂತರ ನಾವು ನಿರಪರಾಧಿಗಳೆಂದು ನ್ಯಾಯಾಲಯ ತೀರ್ಪು ಕೊಟ್ಟನಂತರವೂ ನಮ್ಮ ಬಗ್ಗೆ ರಾಜ್ಯಾದ್ಯಂತ ಆರೋಪಗಳನ್ನು ಮಾಡುತ್ತಾ ತಿರುಗುತ್ತಿರುವಿರಿ. ನಾಳೆ ನಿಮಗೊಂದು ಸುವರ್ಣಾವಕಾಶ. ಬಹುಷಃ ಅಣ್ಣಪ್ಪ ಸ್ವಾಮಿಯ ಇಚ್ಛೆಯೇ ಇದಾಗಿರಬಹುದು. ನಾವು ಮೂರೂ ಜನ ಅಣ್ಣಪ್ಪ ಸ್ವಾಮಿಯ ಮುಂದೆ ನಮ್ಮ ನಿರಪರಾಧಿತನವನ್ನು ಹೇಳಿಕೊಳ್ಳುತ್ತೇವೆ. ನೀವು ಭಾಷಣಗಳಲ್ಲಿ ನಮ್ಮನ್ನು ಆರೋಪಿಸಿದ ರೀತಿಯಲ್ಲಿ ಅಣ್ಣಪ್ಪನ ಮುಂದೆ ಪ್ರಮಾಣ ಮಾಡಿ. ನ್ಯಾಯ ತೀರ್ಮಾನ ಅಣ್ಣಪ್ಪನ ಮೆಟ್ಟಿಲಲ್ಲಿಯೇ ಆಗಲಿ. ಈ ಅವಕಾಶ ಸೃಷ್ಟಿಸಿದ ವಿಶ್ವ ಹಿಂದು ಪರಿಷತ್, ಬಜರಂಗದಳಕ್ಕೆ ಧನ್ಯವಾದಗಳು..’
– ಧೀರಜ್ ಕೆಲ್ಲ, ಮಲ್ಲಿಕ್ ಜೈನ್, ಉದಯ್ ಜೈನ್
ಎಂಬ ಸಂದೇಶವನ್ನು ಕುಸುಮಾವತಿಯವರಿಗೆ ಕಳಿಸಲಾಗಿದೆ ಎಂದು ತಿಳಿದುಬಂದಿದ್ದು, ನಾಳೆ ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.