ಜೈಪುರ: ಬ್ಯಾಂಕಾಕ್ ನಲ್ಲಿ ನವೆಂಬರ್ 24ರಿಂದ 26ರವರೆಗೆ ವಿಶ್ವ ಹಿಂದೂ ಕಾಂಗ್ರೆಸ್ ನಡೆಯಲಿದೆ ಎಂದು ವಿಶ್ವ ಹಿಂದೂ ಪ್ರತಿಷ್ಠಾನದ ಸಂಸ್ಥಾಪಕ ಸ್ವಾಮಿ ವಿಜ್ಞಾನಾನಂದ ತಿಳಿಸಿದರು. ಇಲ್ಲಿನ ಪಥೇಯ ಕಾನ್ ಸಂಸ್ಥಾನದ ಮಹರ್ಷಿ ನಾರದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ವಿಜ್ಞಾನಾನಂದ ಅವರು ಈ ವಿಷಯ ಪ್ರಕಟಿಸಿದರು.
ಐಐಟಿ ಖರಗ್‌ಪುರದ ಇಂಜಿನಿಯರಿಂಗ್ ಪದವೀಧರರಾದ ವಿಜ್ಞಾನಾನಂದ, ಹಿಂದೂ ಸಮಾಜವು ತಮ್ಮ ಸಮುದಾಯದ ಜಾಗತಿಕ, ಮತ್ತು ರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸಲು ಸುಸಂಬದ್ಧವಾದ ಜಾಗತಿಕ ವೇದಿಕೆಯನ್ನು ಹೊಂದಿಲ್ಲ. ಈಗ ಹಿಂದೂ ಸಮಾಜವನ್ನು 21 ನೇ ಶತಮಾನ ಮತ್ತು ಅದರಾಚೆಗೆ ಕೊಂಡೊಯ್ಯುವ ಸಮಯ ಬಂದಿದೆ. ಭವಿಷ್ಯದಲ್ಲಿ ನಮ್ಮ ಸಮುದಾಯವನ್ನು ಆತ್ಮವಿಶ್ವಾಸದಿಂದ ಮುನ್ನಡೆಯಲು ಹಿಂದೂ ಸಮಾಜವು ಒಂದೇ ಸಾಮಾನ್ಯ ವೇದಿಕೆಯಲ್ಲಿ ಒಗ್ಗೂಡಬೇಕಾಗಿದೆ ಎಂದರು. ಕೌಟಿಲ್ಯನ ಮಾತಿನಂತೆ ಅರ್ಥವ್ಯವಸ್ಥೆಯು ಶಕ್ತಿಯ ಮೂಲವಾಗಿದೆ. ಇದು ಆಧುನಿಕ ಜಗತ್ತಿಗೂ ಹೆಚ್ಚು ಅನ್ವಯಿಸುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಚರ್ಚೆ ನಡೆಯಲಿದೆ ಎಂದರು. ಅಲೆಕ್ಸಾಂಡರ್‌ನಿಂದ ಅರಬ್ಬರು, ಬ್ರಿಟಿಷರು, ಪೋರ್ಚುಗೀಸರು, ಡಚ್ ಮತ್ತು ಫ್ರೆಂಚ್ ರು ಇಪ್ಪತ್ತು ಶತಮಾನಗಳಿಗೂ ಹೆಚ್ಚು ಕಾಲ ಹಿಂದೂಗಳನ್ನು ವಸಾಹತುವನ್ನಾಗಿ ಮಾಡಿದರು. ಹಿಂದುಗಳನ್ನು ಶೋಷಣೆಗೆ ಒಳಪಡಿಸಲಾಯಿತು ಮತ್ತು ಬಲವಂತವಾಗಿ ಮತಾಂತರಗೊಳಿಸಲಾಯಿತು. ಆದರೆ ಇಂದಿಗೂ ಹಿಂದುಗಳು ತಮ್ಮ ಪರಂಪರೆ ಆಚಾರ ವಿಚಾರವನ್ನು ಬಿಟ್ಟಿಲ್ಲ. ಹಿಂದು ಸಮಾಜವು ಜಗತ್ತಿಗೆ ಹಲವು ಕೊಡುಗೆ ನೀಡಿದೆ. ಈ ನಿಟ್ಟಿನಲ್ಲಿ ಹಿಂದೂ ಸಮಾಜವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮಹತ್ತರ ಪಾತ್ರ ವಹಿಸಲಿದೆ ಎಂದರು.