ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಸುಳ್ಯದ ಜಯನಗರದಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ ಎರಡು ಮನೆಗಳ ಕಾಂಪೌಂಡ್ ಕುಸಿದು ಮನೆಯೊಂದರ ಛಾವಣಿಗೆ ಹಾನಿಯಾಗಿದೆ.
ಜಯನಗರ ಶ್ರೀ ಗಜಾನನ ಭಜನಾ ಮಂದಿರದ ಬಳಿ ದಾಮೋದರ ಪಡಂಬೈಲು ಎಂಬವರ ಮನೆಯ ಕಾಂಪೌಂಡ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ನೂತನವಾಗಿ ನಿರ್ಮಿಸಿದ್ದ ಮನೆಯ ಸುತ್ತಲೂ ಕಾಂಪೌಂಡ್ ರಚಿಸಿದ್ದು ಅದು ಕುಸಿದು ಬಿದ್ದಿದೆ.
ಅಲ್ಲೇ ಸಮೀಪದ ರುಖಿಯಾ ಎಂಬುವರ ಮನೆಯ ಕಾಂಪೌಂಡ್ ಜನಾರ್ದನ ಗೌಡ ಎಂಬವರ ಮನೆಯ ಮೇಲೆ ಕುಸಿದಿದ್ದು, ಸುಮಾರು ಹತ್ತಕ್ಕೂ ಹೆಚ್ಚು ಸಿಮಂಟ್ ಶೀಟುಗಳು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮಾಧಿಕಾರಿ ತಿಪ್ಪೇಶ್, ಸ್ಥಳೀಯ ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.