ಉಡುಪಿ: ಜಿಲ್ಲೆಯ ವಿವಿಧೆಡೆ ಕ್ಲಿನಿಕ್ ಗಳ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಧಿಡೀರ್ ದಾಳಿ ನಡೆಸಿ ಕೆ.ಪಿ.ಎಂ.ಇ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಲ್ಯಾಬ್ ಹಾಗೂ ಕ್ಲಿನಿಕ್ಗಳನ್ನು ಸೀಜ್ ಮಾಡಿದ್ದಾರೆ.
ಈ ವೇಳೆ ತಾನು ವೈದ್ಯನೆಂದು ಹೇಳಿಕೊಂಡು ಬ್ರಹ್ಮಾವರ ತಾಲೂಕಿನ ಕಂಬಳಗದ್ದೆ ಕ್ರಾಸ್ನ ಕುಂಜಾಲಿನಲ್ಲಿ ಕ್ಲಿನಿಕ್ ಇಟ್ಟುಕೊಂಡು ಆಯುರ್ವೇದಿಕ್, ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ಬಿಕಾಂ ಪದವೀಧರನೊಬ್ಬ ಸಿಕ್ಕಿಬಿದ್ದಿದ್ದಾನೆ. ಬಿಕಾಂ ಪದವಿ ಪಡೆದಿರುವ ಸಂದೇಶ್ ರಾವ್ ಕುಂಜಾಲಿನಲ್ಲಿ ಶ್ರೀಸೂರ್ಯನಾರಾಯಣ ಸ್ವಾಮಿ ಹೆಸರಿನ ಆಯುರ್ವೇದಿಕ್ ಕೇಂದ್ರ ತೆರೆದು ಚಿಕಿತ್ಸೆ ನೀಡುತ್ತಿದ್ದನು. ಈ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದಾಗ ಸಂದೇಶ್ ರಾವ್ ವೈದ್ಯನಲ್ಲ, ಆತ ನಕಲಿ ವೈದ್ಯ ಎಂದು ತಿಳಿದುಬಂದಿದೆ. ಸದ್ಯ ಕ್ಲಿನಿಕ್ ಜಪ್ತಿ ಮಾಡಿದ ಆರೋಗ್ಯಾಧಿಕಾರಿಗಳು, ಆರೋಪಿ ವಿರುದ್ಧ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲು ಮಾಡಲಾಗಿದೆ.
ಉಪ್ಪುಂದದ ಸುಷ್ಮಾ ಕ್ಲಿನಿಕಲ್ ಲ್ಯಾಬ್ ಸೀಜ್ ಮಾಡಿ ಕೇಸ್ ದಾಖಲು ಮಾಡಲಾಗಿದ್ದು, ಕುಂದಾಪುರದ ಬಯೋಲಿನ್ ಕ್ಲಿನಿಕಲ್ ಲ್ಯಾಬ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆರೂರಿನಲ್ಲಿ ಆರೋಗ್ಯಾಧಿಕಾರಿಗಳು ಒಂದು ಕ್ಲಿನಿಕ್ ಜಪ್ತಿ ಮಾಡಿದ್ದಾರೆ. ಆಯುರ್ವೇದಿಕ್ ನೋಂದಣಿಯಲ್ಲಿ ಅಲೋಪತಿ ಕ್ಲಿನಿಕ್ ನಡೆಸುತ್ತಿದ್ದ ವಿಚಾರ ಪತ್ತೆಯಾಗಿದೆ. ಆದಿ ಉಡುಪಿಯ ಧನ್ವಂತರಿ ಕ್ಲಿನಿಕ್, ನಾವುಂದದ ನಂಬಿಯಾರ್ ಕ್ಲಿನಿಕ್ ನಲ್ಲಿ ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ವಿಚಾರ ತಿಳಿದು ಬಂದಿದೆ.