ಬೆಳ್ತಂಗಡಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜು.8 ರಂದು (ಇಂದು) ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ದೇವರ ದರ್ಶನ ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಬಳಿಕ ಕನ್ಯಾಡಿ ಶ್ರೀ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ನಿಮಿತ್ತ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಅಲ್ಲಿಂದ ನೇರವಾಗಿ ಶ್ರೀ ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾಲಯಕ್ಕೆ ಭೇಟಿ ಮಾಡಿ ವೀಕ್ಷಿಸಿದರು. ಬಳಿಕ ಶ್ರೀ ಮಂಜುನಾಥೇಶ್ವರ ಪ್ರಕೃತಿ ಮತ್ತು ಯೋಗ ಚಿಕಿತ್ಸಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ ಬಳಿಕ ಲಾಯಿಲ ಸಂಗಮ ಸಭಾಭವನದಲ್ಲಿ 374 ಫಲಾನುಭವಿಗಳಿಗೆ 94 ಸಿ, ಸಿಸಿ ಹಕ್ಕುಪತ್ರ ಹಾಗೂ ವಿವಿಧ ಯೋಜನೆಗಳ ಧನ ಸಹಾಯ ಹಸ್ತಾಂತರಿಸಲಿದ್ದಾರೆ.
ಭೇಟಿ ವೇಳೆ ಮಾಜಿ ಸಚಿವ ಅಭಯಚಂದ್ರ ಜೈನ್, ಎಂ.ಎಲ್.ಸಿ., ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್, ರಂಜನ್ ಜಿ., ಪ್ರಮುಖರಾದ ಭಗೀರಥ ಜಿ., ರಾಜಶೇಖರ ಶೆಟ್ಟಿ, ಸತೀಶ್ ಕಾಶಿಪಟ್ಣ ಸಹಿತ ಪ್ರಮುಖರು ಉಪಸ್ಥಿತರಿದ್ದರು.