ಹಾಸನ: ಖಾಸಗಿ ಶಾಲೆಯ ಶಿಕ್ಷಕಿ ಓರ್ವರನ್ನು ಅಪಹರಿಸಿದ ಘಟನೆ ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯ ಬಳಿ ಇಂದು ಬೆಳಗ್ಗೆ ನಡೆದಿದೆ.
ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಅರ್ಪಿತಾ ಎಂಬ ಶಿಕ್ಷಕಿಯನ್ನು ಅಪಹರಣ ಮಾಡಲಾಗಿದೆ ಎಂದು ತಿಳಿದುಬಂದಿದೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದ ಅರ್ಪಿತಾ ಅವರನ್ನು ಶಾಲೆ ಮುಂಭಾಗದಿಂದಲೇ ಅಪಹರಿಸಲಾಗಿದೆ. ಶಿಕ್ಷಕಿ ಅರ್ಪಿತಾ ಗುರುವಾರ ಬೆಳಿಗ್ಗೆ ಶಾಲೆಗೆ ಹೊರಟಿದ್ದಾಗ, ಆಕೆಯ ಸಂಬಂಧಿ ರಾಮು ಎಂಬಾತ ಅಪಹರಣ ಮಾಡಿದ್ದಾನೆ ಎಂದು ಶಿಕ್ಷಕಿಯ ಪೋಷಕರು ಆರೋಪಿಸಿದ್ದಾರೆ. 15 ದಿನಗಳ ಹಿಂದೆ ರಾಮು ಮತ್ತು ಪೋಷಕರು ಮದುವೆ ಪ್ರಸ್ತಾಪದೊಂದಿಗೆ ಶಿಕ್ಷಕಿ ಮನೆಗೆ ಬಂದಿದ್ದರು. ಈ ವೇಳೆ ಮದುವೆಗೆ ಶಿಕ್ಷಕಿ ಅರ್ಪಿತಾ ಹಾಗೂ ಕುಟುಂಬದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಶಿಕ್ಷಕಿ ಮದುವೆಗೆ ಒಪ್ಪಿಲ್ಲವೆಂದು ಆಕೆಯನ್ನು ಅಪಹರಣ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ. ತಂಡಗಳನ್ನು ರಚಿಸಿದ್ದು, ಎಲ್ಲ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.