ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆದಾಗ್ಯೂ, ಯೋಜನೆಯ ಬಗ್ಗೆ ಅನೇಕರಲ್ಲಿ ಇನ್ನೂ ಗೊಂದಲಗಳಿವೆ. ಹೀಗಾಗಿ ನಾಗರಿಕರಲ್ಲಿರುವ ಗೊಂದಲ ಬಗೆಹರಿಸಲು ಮುಂದಾಗಿರುವ ಬೆಸ್ಕಾಂ, ಪ್ರಶ್ನೋತ್ತರದ ರೂಪದಲ್ಲಿ ವಿಸ್ತೃತ ಮಾಹಿತಿ ನೀಡಿದೆ. ಬೆಸ್ಕಾಂ ನೀಡಿ ಟ್ವೀಟ್ ಮೂಲಕ ಗೊಂದಲ ಪರಿಹಾರ ಮಾಡುವ ಪ್ರಯತ್ನ ಮಾಡಿದೆ.
ಯೋಜನೆ ಕುರಿತು ಎದುರಾಗುವ ಮೊದಲ ಪ್ರಶ್ನೆ ನಾನೂ ಕೂಡ ಯೋಜನೆಗೆ ಅರ್ಹನೆ ಎಂಬುದು ಈ ಬಗ್ಗೆ ಟ್ವೀಟ್‌ನಲ್ಲಿ ವಿವರಿಸಿರುವ ಬೆಸ್ಕಾಂ ಕರ್ನಾಟಕ ರಾಜ್ಯದ ಎಲ್ಲಾ ಗೃಹ ಬಳಕೆ ಗ್ರಾಹಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದೆ.
ಗೃಹ ಜ್ಯೋತಿ ಯೋಜನೆ ಎಂದರೇನು ಎಂಬ ಪ್ರಶ್ನೆಗೂ ಬೆಸ್ಕಾಂ ಉತ್ತರ ಒದಗಿಸಿದ್ದು, ಗೃಹ ಜ್ಯೋತಿ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ಕರ್ನಾಟಕದ ಪ್ರತಿ ಗೃಹ ಬಳಕೆದಾರರಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಒದಗಿಸುತ್ತದೆ ಎಂದು ತಿಳಿಸಿದೆ.
ಯೋಜನೆಯನ್ನು ಪಡೆಯಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಯೋಜನೆಯನ್ನು ಪಡೆಯಲು ಸೇವಾ ಸಿಂಧು ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯು ಜೂನ್ 18 ರಿಂದ ಪ್ರಾರಂಭವಾಗಿದೆ ಎಂದು ವಿವರಣೆಯನ್ನು ಒದಗಿಸಿದೆ. ಅಲ್ಲದೆ ಯೋಜನೆ ಜಾರಿ ಕುರಿತು ವಿವರಗಳನ್ನು ಒದಗಿಸಿದ್ದು, 2023 ರ ಜುಲೈಯಲ್ಲಿ ಬಳಸಿದ ವಿದ್ಯುತ್‌ಗೆ ಆಗಸ್ಟ್ 1, 2023 ರಿಂದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಬೆಸ್ಕಾಂ ಹೇಳಿದೆ.