ಪುತ್ತೂರು: ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಲು ಮಹಿಳೆಯೊಬ್ಬರಿಂದ ಲಂಚಪಡೆದಿದ್ದ ಹಣವನ್ನು ಉಗ್ರಾಣಿಯೊಬ್ಬರು ಮರಳಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧ ‘ಶೂನ್ಯ ಸಹನೆ’ ಹೊಂದಿರುವ ಶಾಸಕ ಅಶೋಕ್ ಕುಮಾರ್ ರೈ ಅವರ ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಪ್ರಾರಂಭಗೊಂಡಂತಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಅಷ್ಟಮಿ ಕಾರ್ಯಕ್ರಮದ ಪ್ರಯುಕ್ತ ಶಾಸಕ ಅಶೋಕ್ ರಯಯವರು ಕುಂಡಡ್ಕ ದೇವಸ್ಥಾನಕ್ಕೆ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಗೆ ಬಂದಿದ್ದ ಕುಳಗ್ರಾಮದ ಮಹಿಳೆ ಚಂದ್ರಾವತಿ ಎಂಬವರು ಶಾಸಕರ ಬಳಿ ಬಂದು, ‘ನನ್ನ ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಿಲ್ಲ, ನನಗೆ ಅಕ್ರಮ ಸಕ್ರಮ ಸಂಜೂರು ಮಾಡಿಲ್ಲ, ನಾನು ಉಗ್ರಾಣಿಗೆ 30 ಸಾವಿರ ರೂಪಾಯಿ ನೀಡಿದ್ದೇನೆ, ಬೀಡಿ ಕಟ್ಟಿ ಜೀವನ ಮಾಡುವ ನನ್ನಿಂದ ಉಗ್ರಾಣಿ ಲಂಚ ಪಡೆದುಕೊಂಡಿದ್ದಾರೆ ಮಾತ್ರವಲ್ಲದೇ ಹಣ ಕೊಟ್ಟರೂ ನನ್ನ ಕೆಲಸ ಮಾಡಿಕೊಟ್ಟಿಲ್ಲ. ನನಗೆ ನ್ಯಾಯ ಕೊಡಬೇಕು, ನನಗೆ ಅಕ್ರಮ-ಸಕ್ರಮ ಮಾಡಿಕೊಡಬೇಕು..’ ಎಂದು ಶಾಸಕರಲ್ಲಿ ಹೇಳಿಕೊಂಡಿದ್ದರು.
ಮಹಿಳೆಯ ಆರೋಪವನ್ನು ಆಲಿಸಿದ ಶಾಸಕರು ತಕ್ಷಣವೇ ಉಗ್ರಾಣಿಯ ನಂಬರ್ ಪಡೆದು ಕರೆ ಮಾಡಿ, ‘ನೀವು ಚಂದ್ರಾವತಿಯವರಿಂದ ಅಕ್ರಮ ಸಕ್ರಮ ವಿಲೇವಾರಿಗೆ ಪಡೆದುಕೊಂಡಿರುವ 30 ಸಾವಿರ ರೂಪಾಯಿಗಳನ್ನು ಒಂದು ವಾರದೊಳಗೆ ಮರಳಿ ಕೊಡಬೇಕು. ಇಲ್ಲವಾದರೆ ನಿಮ್ಮನ್ನು ಕೆಲಸದಿಂದ ಸಸ್ಪೆಂಡ್ ಮಾಡಿಸುತ್ತೇನೆ, ಬಡವರಿಂದ ಹಣ ಯಾಕೆ ಪಡೆದುಕೊಂಡಿದ್ದೀರಿ..’ ಎಂದು ಆತ ಪಡೆದುಕೊಂಡಿದ್ದ ಲಂಚದ ಹಣವನ್ನುಒಂದು ವಾರದ ಗಡುವು ನೀಡಿದ್ದರು.
ಇದರಂತೆ ಲಂಚ ಪಡೆದುಕೊಂಡಿದ್ದ ಉಗ್ರಾಣಿ, ಸೆ. 14ರಂದು ಮಹಿಳೆಯ ಮನೆಗೆ ಬಂದ ತಾನು ಪಡೆದುಕೊಂಡಿದ್ದ ಲಂಚದ ಹಣ 30 ಸಾವಿರ ರೂಪಾಯಿಗಳನ್ನು ಮರಳಿಸಿದ್ದಾರೆ.
ಈ ಮೂಲಕ, ಸಂತ್ರಸ್ತ ಮಹಿಳೆಯ ದೂರಿಗೆ ಶಾಸಕರ ಈ ತುರ್ತು ಸ್ಪಂದನೆಯಿಂದ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ಲಂಚ ಪಡೆದುಕೊಳ್ಳುವ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟುವಂತಾಗಿದೆ.