main logo

ಪರೀಕ್ಷೆ ಬರೆಯುತ್ತಿದ್ದ ವೇಳೆ ಮಗುವಿಗೆ ಜನ್ಮ ನೀಡಿದ ಪಿಸಿ ಪರೀಕ್ಷಾರ್ಥಿ

ಪರೀಕ್ಷೆ ಬರೆಯುತ್ತಿದ್ದ ವೇಳೆ ಮಗುವಿಗೆ ಜನ್ಮ ನೀಡಿದ ಪಿಸಿ ಪರೀಕ್ಷಾರ್ಥಿ

ಕಾನ್ಪುರ: ಉತ್ತರ ಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗೆ ಆಗಮಿಸಿದ ಪರೀಕ್ಷಾರ್ಥಿಯೊಬ್ಬರು ಪರೀಕ್ಷೆಯ ನಡುವೆಯೇ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಸ್ವಲ್ಪ ಹೊತ್ತಿನಲ್ಲೇ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
28 ವರ್ಷದ ಸುನೀತಾ ದೇವಿ ಪರೀಕ್ಷೆಗೆ ಹಾಜರಾಗಿ ಬಳಿಕ ಮಗುವಿಗೆ ಜನ್ಮ ನೀಡಿದವರು, ಗರ್ಭಾವಸ್ಥೆಯ ಕೊನೆಯ ಹಂತದಲ್ಲಿದ್ದ ಅವರು ಭಾನುವಾರ ನಿಗದಿಯಾಗಿದ್ದ ಉತ್ತರ ಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯ ಮಧ್ಯೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ತುಂಬು ಗರ್ಭಿಣಿ ಸುನೀತಾ ಅವರು ಭಾನುವಾರ ಪರೀಕ್ಷೆ ಬರೆಯುವುದಕ್ಕಾಗಿ ಮಹರ್ಷಿ ದಯಾನಂದ ಮಿಷನ್ ಇಂಟರ್ ಕಾಲೇಜಿಗೆ ಪರೀಕ್ಷೆ ಬರೆಯುವುದಕ್ಕಾಗಿ ಆಗಮಿಸಿದ್ದರು. 10 ಗಂಟೆಗೆ ಪರೀಕ್ಷೆಗೆ ಹಾಜರಾದ ಅವರಿಗೆ 11.30ರ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವಿಚಾರವನ್ನು ಅವರು ಅಲ್ಲಿದ್ದ ಮ್ಯಾಜಿಸ್ಟ್ರೇಟ್ ಬಾಲಕಿಶೋರ್ ದುಬೆ ಅವರಿಗೆ ತಿಳಿಸಿದ್ದಾರೆ. ಅವರು ಆಕೆಯನ್ನು ಶಾಲೆಯ ಮ್ಯಾನೇಜರ್ ಪ್ರಭಾತ್ ಶುಕ್ಲಾ ಅವರ ಕಾರಿನಲ್ಲಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಬಳಿಕ ಸುನೀತಾ ಅವರಿಗೆ ಸಾಮಾನ್ಯ ಹೆರಿಗೆಯಾಗಿದೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಶಿಪ್ರಾ ಝಾ ಹೇಳಿದ್ದಾರೆ.

ಇದಾದ ಬಳಿಕ ಸುನೀತಾ ಅವರು ಮಾತನಾಡಿದ್ದು, ನನಗೆ ಪರೀಕ್ಷೆ ಮಧ್ಯದಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಕೇವಲ 50 ಪ್ರಶ್ನೆಗಳನ್ನು ಮಾತ್ರ ಎದುರಿಸಲು ಸಾಧ್ಯವಾಯ್ತು ಎಂದು ಹೇಳಿದ್ದಾರೆ. ಇನ್ನು ಮಗುವಿಗೆ ಪೋಷಕರು ಆರಾಧ್ಯ ಎಂದು ಹೆಸರಿಟ್ಟಿದ್ದು, ರೈತರಾಗಿದ್ದ ಸುನೀತಾ ಅವರ ಪತಿ ಕಳೆದ ಸೆಪ್ಟೆಂಬರ್‌ನಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಗ ಸುನೀತಾ ಅವರು 3 ತಿಂಗಳ ಗರ್ಭಿಣಿಯಾಗಿದ್ದರು. ಈಗ ಹುಟ್ಟಿದ ಮಗಳಲ್ಲದೇ ಇನ್ನೊಬ್ಬಳು 5 ವರ್ಷದ ಹೆಣ್ಣು ಮಗಳು ಈ ದಂಪತಿಗಳಿಗಿದೆ.

Related Articles

Leave a Reply

Your email address will not be published. Required fields are marked *

error: Content is protected !!