ಉಳ್ಳಾಲ: ಪುತ್ತೂರು ಮೂಲದ ವಿದ್ಯಾರ್ಥಿನಿಯೋರ್ವಳು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಇದೀಗ ಯುವಕನೊಂದಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಕೋಟೆಕಾರು ಬಳಿಯ ಮಾಡೂರಿನ ಪಿಜಿಯಲ್ಲಿದ್ದು, ದೇರಳಕಟ್ಟೆಯ ಖಾಸಗಿ ಯುನಿವರ್ಸಿಟಿಯಲ್ಲಿ ಪಿಎಚ್ ಡಿ ಅಧ್ಯಯನ ಮಾಡುತ್ತಿದ್ದ ಪುತ್ತೂರು ಮುಕ್ಕೆ ನಿವಾಸಿ ಚೈತ್ರಾ (27) ನಾಪತ್ತೆಯಾದ ವಿದ್ಯಾರ್ಥಿನಿ.
ಚೈತ್ರಾ ದೇರಳಕಟ್ಟೆಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಎಂಎಸ್ಸಿ ಮುಗಿಸಿ ಫುಡ್ ಸೆಕ್ಯುರಿಟಿ ವಿಷಯದಲ್ಲಿ ಪಿಎಚ್ ಡಿ ಅಧ್ಯಯನ ನಡೆಸುತ್ತಿದ್ದಳು. ಕೋಟೆಕಾರು ಮಾಡೂರಿನ ಪಿಜಿಯಲ್ಲಿ ಚೈತ್ರಾ ನೆಲೆಸಿದ್ದಳು. ಚೈತ್ರಾಳ ತಂದೆ ಮೃತರಾಗಿದ್ದು ಮಂಗಳೂರಿನ ಸಂಬಂಧಿಕರ ಆಶ್ರಯದಲ್ಲಿದ್ದುಕೊಂಡು ಎಂಎಸ್ಸಿ ಪೂರೈಸಿದಳು. ಕಳೆದ ಫೆ.17ರಂದು ಬೆಳಗ್ಗೆ 9 ಗಂಟೆಗೆ ಮಾಡೂರಿನ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದ ಚೈತ್ರಾ ಕದ್ರಿಯ ಮನೆಗೂ ತೆರಳದೆ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಳು ಎಂದು ದೂರಲಾಗಿದೆ. ಫೆ.17 ರಂದು ಚೈತ್ರಾ ನಾಪತ್ತೆಯಾದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಇದಾಗಿ ಮೂರು ದಿನ ಕಳೆದರೂ ಚೈತ್ರಾ ಮರಳಿ ಬಂದಿಲ್ಲ.