newsroomkannada.com

ಆ.27: ಪುತ್ತೂರಿನಲ್ಲಿ ಮಹಾಮಾತೆ ದೇಯಿ ಬೈದೆತಿಯ ಬದುಕಿನ ಅನಾವರಣ – ‘ಗೆಜ್ಜೆಗಿರಿತ ಬೊಲ್ಪು’

ತುಳುನಾಡಿನ ಅವಳಿ ವೀರ ಪುರುಷರಾದ ಕೊಟಿ-ಚನ್ನಯರ ತಾಯಿ, ಮಹಾಮಾತೆ ದೇಯಿ ಬೈದೆತಿಯ ಜನನ ಮತ್ತು ಆಕೆಯ ಜೀವನದ ಮೇಲೆ ಬೆಳಕು ಚೆಲ್ಲುವ ಒಂದು ವಿಶಿಷ್ಟ ನೃತ್ಯ ರೂಪಕವೇ ‘ಗೆಜ್ಜೆ ಗಿರಿತ ಬೊಲ್ಪು’ (ಗೆಜ್ಜೆ ಗಿರಿಯ ಬೆಳಕು).

ಗೆಜ್ಜೆಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಈ ನೃತ್ಯ ರೂಪಕ ನಿರ್ಮಾಣಗೊಂಡು ಆ ಪವಿತ್ರ ಕ್ಷೇತ್ರದಲ್ಲೇ ಪ್ರಥಮ ಪ್ರದರ್ಶನವನ್ನು ಕಾಣುತ್ತದೆ. ಇದರ ಸಾಹಿತ್ಯ ರಚನೆ ಸುಧಾಕರ ಸುವರ್ಣ ಅವರದ್ದಾಗಿದ್ದು, ಈ ನೃತ್ಯ ರೂಪಕದ ಪರಿಕಲ್ಪನೆ, ನೃತ್ಯ ಸಂಯೋಜನೆ ಹಾಗೂ ಒಟ್ಟು ನಿರ್ದೇಶನವನ್ನು ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಅವರದ್ದಾಗಿದೆ.

‘ಗೆಜ್ಜೆಗಿರತ ಬೊಲ್ಪು’ ಎಂಬ ಈ ನೃತ್ಯ ರೂಪಕ ತುಳು ಸಾಹಿತ್ಯ ಹಾಗೂ ನೃತ್ಯ ಕ್ಷೇತ್ರದಲ್ಲಿ ಬಹಳ ವಿಶಿಷ್ಟವಾದುದು, ಯಾಕಂದ್ರೆ ಈ ರೂಪಕದಲ್ಲಿ ಶಾಸ್ತ್ರೀಯವಾಗಿರುವ ಭರತನಾಟ್ಯದ ಶೈಲಿ ಹಾಗೂ ನಮ್ಮ ಮಣ್ಣಿನ ಜನಪದ ನೃತ್ಯದ ಶೈಲಿಗಳನ್ನು ಹಿತ-ಮಿತವಾಗಿ ಅಳವಡಿಸಿಕೊಂಡು ಸಮಪಾಕದ ರೂಪಕವಾಗಿ ಇದು ಮೂಡಿಬಂದಿದೆ ಎಂಬ ಮಾತನ್ನು ಗುರುಗಳಾದ ವಿದ್ವಾನ್ ದೀಪಕ್ ಪುತ್ತೂರು ಅವರು ಹೆಮ್ಮೆಯಿಂದ ಹೇಳುತ್ತಾರೆ.

ತುಳು ಪಾಡ್ದನಗಳು ಮತ್ತು ಅದಕ್ಕೆ ಹೊಂದುವಂತಹ ಜನಪದೀಯ ಶೈಲಿಯ ಸಮೂಹ ನೃತ್ಯ, ಚೆನ್ನು ಕುಣಿತದ ‘ಲೇಲೆ’ ಪಾಡುಗಳು ನಮ್ಮ ಮಣ್ಣಿನ ಸೊಗಡನ್ನು ಕಲಾ ಪ್ರೇಕ್ಷಕರಿಗೆ ಉಣಬಡಿಸಿದರೆ, ಇಲ್ಲಿ ಬರುವ ಯುದ್ಧದ ಸನ್ನಿವೇಶಗಳು ಹಾಗೂ ಇತರೇ ಸಮೂಹ ನೃತ್ಯಗಳು ಶಾಸ್ತ್ರೀಯ ಶೈಲಿಯಲ್ಲಿ ಮೂಡಿಬಂದು ನಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುತ್ತವೆ.
ಇನ್ನು, ರೂಪಕದ ಪ್ರಾರಂಭದಲ್ಲಿ ಬರುವಂತಹ ಶ್ರೀ ದೇವಿಯ ಒಂದು ತಾಂಡವ ನೃತ್ಯ ಶುದ್ಧ ಭರತನಾಟ್ಯ ಶೈಲಿಯಲ್ಲಿ ಮೂಡಿರಲಿದೆ.

ಒಟ್ಟಿನಲ್ಲಿ ಹೇಳುವುದಾದರೆ ‘ಗೆಜ್ಜಿಗಿರಿತ ಬೊಲ್ಪು’ ನೃತ್ಯ ರೂಪಕವು ಶಾಸ್ತ್ರೀಯ ಹಾಗೂ ತುಳುನಾಡಿನ ಜನಪದೀಪ ಪರಂಪರೆಯ ವಿಚಾರಗಳನ್ನು ಮೈಗೂಡಿಸಿಕೊಂಡು ನಮ್ಮ ಹಿರಿಯರು ರೂಪಿಸಿಕೊಟ್ಟು ನಂತರದ ಪೀಳಿಗೆಗೆ ಒಪ್ಪಿಸಿಕೊಟ್ಟು ಹೋಗಿರುವ ಜನಪದ ಸಂಸ್ಕೃತಿಯ ಶ್ರೀಮಂತಿಕೆಯನ್ನು, ಶಾಸ್ತ್ರೀಯತೆಯ ಸ್ವರೂಪವಾಗಿರುವ ಭರತನಾಟ್ಯದೊಂದಿಗೆ ಸಮ್ಮಿಳಿತಗೊಳಿಸಿ ಪ್ರೇಕ್ಷಕರಿಗೆ ಕಲಾ ಮೃಷ್ಟಾನ್ನವನ್ನು ಉಣಬಡಿಸುವ ಬಹುದೊಡ್ಡ ಪ್ರಯತ್ನಕ್ಕೆ ವಿದ್ಯಾನ್ ದೀಪಕ್ ಕುಮಾರ್ ಪುತ್ತೂರು ಮತ್ತು ಅವರ ತಂಡದ ಸದಸ್ಯರು ಕೈಹಾಕಿದ್ದಾರೆ.

ಕಥಾ ಹಿನ್ನಲೆ:
ಮಾತೆ ದೇಯಿ ಬೈದೆತಿಯನ್ನು ಆದಿಶಕ್ತಿ ದೇವಿಯ ಅಂಶವಾಗಿ ಪರಿಗಣಿಸಲಾಗಿದೆ. ಆದಿ ಪರಾಶಕ್ತಿ ದೇವಿಯು ಪ್ರಪಂಚದಲ್ಲಿ ಧರ್ಮ ಸ್ಥಾಪನೆಗೆ ಅನೇಕ ರೂಪಗಳನ್ನು ತಾಳಿ ದುಷ್ಟರನ್ನು ನಿಗ್ರಹಿಸಿ ಧರ್ಮ ಸ್ಥಾಪನೆ ಮಾಡುತ್ತಾಳೆ. ಅದೇ ರೀತಿಯಲ್ಲಿ ತುಳುನಾಡಿಗೆ ಬಂದು ಇಲ್ಲಿಯ ಸಂಸ್ಕೃತಿಯ ಪ್ರತೀಕವಾಗಿ ಜುಮಾದಿ ದೈವದ ಸ್ವರೂಪವನ್ನು ಪಡೆದು ಈ ನೆಲದಲ್ಲಿ ಧರ್ಮ ಸ್ಥಾಪನೆಗೆ ಕಾರಣೀಕರ್ತಳಾಗುತ್ತಾಳೆ.

ಧರ್ಮ ಸಂಸ್ಥಾಪನೆಗಾಗಿ ಈ ಮಣ್ಣಿನಲ್ಲಿ ಪ್ರಕಟಗೊಂಡ ಎರಡು ಶಕ್ತಿಗಳು, ದೈವೀ ಶಕ್ತಿಯಾಗಿ ಜುಮಾದಿ ದೈವವಿದ್ದರೆ, ಮಾನವ ಸ್ವರೂಪಳಾಗಿ ದೇಯಿ ಬೈದೆತಿಯ ರೂಪದಲ್ಲಿ ಆ ಶಕ್ತಿ ಇಲ್ಲಿ ಮೈದಳೆಯುತ್ತದೆ.

ಸಾಯನ ಬೈದ್ಯರು ಏರಾಜೆ ಬರ್ಕೆಯಲ್ಲಿ ನೆಲೆಸಿ ಅಲ್ಲಿ ಕುಲಕಸುಬನ್ನು ನಡೆಸುತ್ತಾ, ತಾವು ನಂಬಿಕೊಂಡು ಬಂದ ಜುಮಾದಿ ದೈವವನ್ನು ಬಹಳ ಭಯ-ಭಕ್ತಿಯಿಂದ ಆರಾಧನೆ ಮಾಡಿಕೊಂಡು ಬರುತ್ತಿರುತ್ತಾರೆ. ಅವರ ಈ ಭಕ್ತಿಗೆ ಒಲಿದ ದೈವವು ಅವರ ಕನಸಿನಲ್ಲಿ ಬಂದು, ಧರ್ಮದ ಉಳಿವಿಗಾಗಿ ತಾನು ‘ನರಮಾನ್ಯೊಟ್ಟು’ ಅಂದರೆ ಮನುಷ್ಯ ರೂಪದಲ್ಲಿ ಈ ಬೀಡಿಗೆ ಬರುತ್ತೇನೆ ಎಂದು ಅಪ್ಪಣೆ ಕೊಡಿಸುತ್ತದೆ.

ನಂತರ ಬರುವ ಪಾಡ್ದನದಲ್ಲಿ ಆ ಜೇವು ಕೇದಗೆ (ಹುಡುಗಿ ಕೇದಗೆ) ಕಥೆಯನ್ನು ವಿವರಿಸಲಾಗಿದೆ. ಕೇದಗೆಯ ಹುಟ್ಟು-ಬಾಲ್ಯ-ಬೆಳವಣಿಗೆಗಳನ್ನು ಬಹಳ ಸುಂದರವಾಗಿ ವರ್ಣಿಸುತ್ತಾ ಹೋಗುವ ಈ ಭಾಗವನ್ನು ರೂಪಕದ ತಿರುಳು ಎಂದರೆ ತಪ್ಪಾಗಲಾರದು.

ಪಾಡ್ದನದ ಹಾಡಿಗೆ ಸಮೂಹ ನೃತ್ಯವನ್ನು ಅಳವಡಿಸಿರುವುದು ಇದರ ಒಂದು ವಿಶೇಷತೆ. ಕೇಂಜವ ಹಾಗೂ ಕಾಂಜವ ಎಂಬ ಪಕ್ಷಿ ದಂಪತಿ ಸಂತೋಷದಿಂದ ಸಂಸಾರವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಹೆಣ್ಣು ಪಕ್ಷಿ ಗರ್ಭಿಣಿಯಾಗುತ್ತದೆ. ಅದರ ಬಸುರಿ ಬಯಕೆಯನ್ನು ತೀರಿಸಲು ಗಂಡು ಪಕ್ಷಿಯು ಏಳು ಸಮುದ್ರಗಳನ್ನು ದಾಟಿ ಹಾರಿಹೋಗುತ್ತದೆ. ಆದರೆ ಬಹುಕಾಲವಾದರೂ ಆ ಗಂಡು ಪಕ್ಷಿ ಮರಳಿ ಬಾರದೇ ಇದ್ದ ಸಂದರ್ಭದಲ್ಲಿ ಹೆಣ್ಣು ಪಕ್ಷಿ ದೇವರಿಗೆ ಹರಕೆ ಹೊತ್ತು, ಅದರಂತೆ ತನ್ನ ಗಂಡ ಸುರಕ್ಷಿತವಾಗಿ ಮರಳಿದರೆ ಒಂದು ಮೊಟ್ಟೆಯನ್ನು ನಿನಗೆ ಅರ್ಪಿಸುತ್ತೇನೆ ಎಂದು ಬೇಡಿಕೊಳ್ಳುತ್ತದೆ. ಹೆಣ್ಣು ಪಕ್ಷಿಯ ಹರಕೆ ಫಲಿಸಿ, ಗಂಡು ಪಕ್ಷಿ ಸುರಕ್ಷಿತವಾಗಿ ಮರಳಿ ಬಂದ ಸಂದರ್ಭದಲ್ಲಿ ಹೆಣ್ಣು ಪಕ್ಷಿ ತಾನು ಹೊತ್ತುಕೊಂಡಿದ್ದ ಹರಕೆಯಂತೆ ತನ್ನ ಒಂದು ಮೊಟ್ಟಯನ್ನು ದೇವರಿಗೆ ಅರ್ಪಿಸಲು ಗಂಡು ಪಕ್ಷಿಯಲ್ಲಿ ನೀಡುತ್ತದೆ.

ಅದರಂತೆ ಗಂಡು ಪಕ್ಷಿಯು ಆ ಮೊಟ್ಟೆಯನ್ನು ತನ್ನ ರೆಕ್ಕೆಯ ನಡುವಿನಲ್ಲಿರಿಸಿ ಹಾರುತ್ತಿರಬೇಕಾದರೆ, ಆ ಮೊಟ್ಟೆ ಜಾರಿ ಒಂದು ನೀರಿನ ಕೊಳಕ್ಕೆ ಬೀಳುತ್ತದೆ (ಪಾಡ್ದನದಲ್ಲಿ ಇದನ್ನು ಕಡಲು ಎಂದು ಉಲ್ಲೇಖಿಸಲಾಗಿದೆ).

ಆ ನೀರಿನ ಕೊಳಕ್ಕೆ ಸ್ನಾನಕ್ಕೆಂದು ಬಂದ ಪೆಜನಾರು ಎಂಬ ಬ್ರಾಹ್ಮಣರಿಗೆ ಈ ಬಂಗಾರದ ಬಣ್ಣದ ಮೊಟ್ಟೆ ಸಿಗುತ್ತದೆ. ಇದನ್ನು ಕಂಡ ಆ ಬ್ರಾಹ್ಮಣರು ಕುತೂಹಲಗೊಂಡು ಅದನ್ನು ತಮ್ಮ ಮನೆಗೊಯ್ಯುತ್ತಾರೆ. ಒಂದು ದಿನ ಆ ಮೊಟ್ಟೆಯೊಡೆದು ಅದರೊಳಗಿಂದ ಬಂಗಾರದ ಮೈಬಣ್ಣದ ಹುಡುಗಿ ಹುಟ್ಟಿ ಬರುತ್ತಾಳೆ, ಅವಳನ್ನು ‘ಜೇವು ಕೇದಗೆ’ ಎಂದು ಕರೆಯುತ್ತಾರೆ.

ಈ ಜೇವು ಕೇದಗೆ ತನ್ನ ಸಾಕು ತಂದೆಯ ಮನೆಯಲ್ಲಿ ಬಹಳ ಸಂತೋಷದಿಂದ ಕಾಲ ಕಳೆಯುತ್ತಿರಬೇಕಾದರೆ, ಅದೊಂದು ದಿನ ಆಕೆ ಋತುಮತಿಯಾಗುತ್ತಾಳೆ. ಆ ಕಾಲದಲ್ಲಿದ್ದ ಬ್ರಾಹ್ಮಣ ಸಂಪ್ರದಾಯದಂತೆ, ಹುಡುಗಿಯೊಬ್ಬಳು ಮದುವೆಗೆ ಮೊದಲೇ ಋತುಮತಿಯಾದಲ್ಲಿ ಅವಳ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿನಲ್ಲಿ ಬಿಡಬೇಕೆಂಬ ರಿವಾಜು ಇದ್ದುದರಿಂದ ಈ ಜೇವು ಕೇದಗೆಯ ಸಾಕು ತಂದೆ-ತಾಯಿಯರು ಬಹಳ ಬೇಸರದಿಂದ ತಮ್ಮ ಸಂಪ್ರದಾಯವನ್ನೂ ಮೀರಲಾಗದೆ ಆಕೆಯನ್ನು ಕಾಡಿಗೆ ಕರೆದೊಯ್ದು ಆಕೆಯ ಕಣ್ಣಿಗೆ ಬಟ್ಟೆ ಕಟ್ಟಿ ಆ ಗೊಂಡಾರಣ್ಯದಲ್ಲಿ ಬಿಟ್ಟು ಬರುತ್ತಾರೆ.

ಜೇವು ಕೇದಗೆಯ ಸಾಕು ತಂದೆಯ ಈ ಅಸಹಾಯಕ ಸ್ಥಿತಿಯನ್ನು ಈ ರೂಪಕದಲ್ಲಿ ಬಹಳ ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಟ್ಟಿರುವುದು ಇದರ ಇನ್ನೊಂದು ಹೈಲೈಟ್ ಎನ್ನಬಹುದು. ಜಾತಿಯ ಕಟ್ಟಲೆಯನ್ನು ಮುರಿಯಲಾರದ ನಿರ್ಬಂಧ ಒಂದೆಡೆಯಾದರೆ, ತಾನೇ ತಂದು ಸಾಕಿ ಬೆಳೆಸಿದ ಮುದ್ದು ಮಗುವನ್ನು ಇದೀಗ ತನ್ನ ಕೈಯಾರೆ ಘೋರ ಕಾನನದಲ್ಲಿ ಕಣ್ಣು ಕಟ್ಟಿ ಬಿಡಬೇಕಾದ ಯಮ ಸಂಕಟ ಇನ್ನೊಂದೆಡೆ.. ಇದು ಆ ತಂದೆಯ ಮಾತೃ ಹೃದಯದ ಬೇಗುದಿಗೆ ಹಿಡಿದ ಕೈಗನ್ನಡಿಯಂತೆ ಈ ದೃಶ್ಯವನ್ನು ಕಟ್ಟಿಕೊಡುವ ಸಾಹಸವನ್ನು ಸಮರ್ಥವಾಗಿ ನಿಭಾಯಿಸುವ ಸರ್ವಪ್ರಯತ್ನವಿಲ್ಲಿ ಮೂಡಿ ಬಂದಿದೆ.

ಈ ಸಂದರ್ಭದಲ್ಲಿ ಘೋರ ಕಾನನದಲ್ಲಿ ಒಬ್ಬಂಟಿಯಾದ ಆ ಹೆಣ್ಣುಮಗು ತನ್ನ ತಂದೆಯನ್ನು ಕಾಣದೆ ಆ ಕಾಡಿನಲ್ಲಿ ಪರಿತಪಿಸುವ ಸನ್ನಿವೇಶವೂ ವೀಕ್ಷಕರ ಮೇಲೆ ಗಾಢ ಪರಿಣಾಮನ್ನುಂಟು ಮಾಡುತ್ತದೆ. ಇದೆಲ್ಲಾ ದೈವ ನಿರ್ಣಯದಂತೆ ನಡೆದರೂ ಮಾನುಷ ರೂಪಿಗಳಾಗಿ ನಾವದನ್ನು ನೋಡುವಾಗ ಆ ಭಾವನೆಗಳ ತಾಕಲಾಟ ನಮ್ಮನ್ನೂ ಕಾಡುವಂತೆ ಮಾಡುವುದೇ ಈ ರೂಪಕದ ನಿಜ ಶಕ್ತಿ ಎನ್ನಬಹುದು.

ಈ ಸಂದರ್ಭದಲ್ಲಿ ಆಪದ್ಬಾಂಧವನಂತೆ ಅಲ್ಲಿಗೆ ಬರುವ ಸಾಯನ ಬೈದ್ಯರು ಅನಾಥವಾಗಿ ಅಳುತ್ತಾ ಪರಿತಪಿಸುತ್ತಿದ್ದ ಆ ಬಾಲೆಯನ್ನು ರಕ್ಷಿಸಿ ತನ್ನೊಂದಿಗೆ ಕರೆದೊಯ್ಯುತ್ತಾರೆ. ಮಾತ್ರವಲ್ಲದೇ ಆಕೆಯ ಕುಲ-ಗೋತ್ರವನ್ನು ವಿಚಾರಿಸದೇ ತನ್ನ ತಂಗಿಯ ಸ್ಥಾನವನ್ನು ಕೊಟ್ಟು ಆಕೆಯನ್ನು ‘ಬೈದ್ಯ’ ಕುಲಕ್ಕೆ ಸೇರಿಸಿಕೊಳ್ಳುವಲ್ಲಿಗೆ ಈ ಕಥೆ ಇನ್ನೊಂದು ಮಗ್ಗುಲಿಗೆ ಹೊರಳಿಕೊಳ್ಳುತ್ತದೆ.

ಇಲ್ಲಿ ಈ ಜೇವು ಕೇದಗೆ ಬಹಳ ಸಂತೋಷದಿಂದ ಆಡಿ-ಪಾಡಿ ದಿನ ಕಳೆಯುವ ಸನ್ನಿವೇಶವನ್ನು ವರ್ಣಿಸುವ ‘ಚೆನ್ನು ಕುಣಿತ’ ಈ ರೂಪಕಕ್ಕೊಂದು ಹೊಸ ಕಳೆಯನ್ನುತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಇಲ್ಲಿ ಈ ಜೇವು ಕೇದಗೆ ಬಹಳ ಸಂತೋಷದಿಂದ ಆಡಿ-ಪಾಡಿ ದಿನ ಕಳೆಯುವ ಸನ್ನಿವೇಶವನ್ನು ವರ್ಣಿಸುವ ‘ಚೆನ್ನು ಕುಣಿತ’ ಈ ರೂಪಕಕ್ಕೊಂದು ಹೊಸ ಕಳೆಯನ್ನುತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಬಳಿಕ ಜೇವು ಕೇದಗೆ ತನ್ನ ಸಹೋದರ ಸಾಯನ ಬೈದ್ಯರಿಂದ ವೈದ್ಯ ವೃತ್ತಿಯನ್ನು ಕಲಿಯುವ ಮತ್ತು ಅದರಲ್ಲಿ ಪರಿಣತಿಯನ್ನು ಪಡೆದುಕೊಳ್ಳುವ ಸನ್ನಿವೇಶಗಳನ್ನು ಬಹಳ ಸೊಗಸಾಗಿ ವರ್ಣಿಸಲಾಗಿದೆ.

ಬಳಿಕ ಆಕೆಯನ್ನು ಕರ್ಗಲ್ಲ ತೋಟ ಕಾಂತಣ್ಣ ಬೈದ್ಯರಿಗೆ ಮದುವೆ ಮಾಡಿಕೊಟ್ಟ ಮೇಲೆ ಈಕೆಯ ಬದುಕು ಹೊಸ ರೂಪವನ್ನು ಪಡೆದುಕೊಳ್ಳುತ್ತದೆ.

ಈ ನೃತ್ಯ ರೂಪಕ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ಪುತ್ತೂರು ಇವರು ನಿರ್ಮಾಣದಲ್ಲಿ ಮೂಡಿಬಂದಿದ್ದು. ಹಾಡುಗಾರಿಕೆಯಲ್ಲಿ ನಂದಕುಮಾರ್ ಉನ್ನಿಕೃಷ್ಣನ್ ಬೆಂಗಳೂರು (ಪುರುಷ ಧ್ವನಿ) ಹಾಗೂ ವಿದುಷಿ ಪ್ರೀತಿಕಲಾ ಪುತ್ತೂರು (ಸ್ತ್ರೀ ಧ್ವನಿ) ಇಬ್ಬರು ಕಲಾವಿದರು ತೊಡಗಿಸಿಕೊಂಡಿದ್ದಾರೆ. ಮೃದಂಗ ಹಾಗೂ ಲಯ ವಾದ್ಯದಲ್ಲಿ ವಿದ್ವಾನ್ ಹರ್ಷ ಸಾಮಗ ಬೆಂಗಳೂರು ಇವರು ಸಾಥ್ ನೀಡುತ್ತಾರೆ. ಕೊಳಲು ವಾದನದಲ್ಲಿ ನಿತೀಶ್ ಅಮ್ಮಣ್ಣಾಯ ಬೆಂಗಳೂರು, ರಿದಂ ಪ್ಯಾಡ್ ನಲ್ಲಿ ಕಾರ್ತಿಕ್ ವೈಧಾಥ್ರಿ ಬೆಂಗಳೂರು ಹಾಗೂ ಕೀಬೋರ್ಡ್ ಹಾಗೂ ಎಫೆಕ್ಟ್ಸ್ ನಲ್ಲಿ ಸಂಗೀತ್ ಥಾಮಸ್ ಬೆಂಗಳೂರು ಇವರು ಸಹಕರಿಸಲಿದ್ದಾರೆ. ಈ ನೃತ್ಯ ರೂಪಕದ ಧ್ವನಿ ಮುದ್ರಣವನ್ನು ಓಂಕಾರ್ ಸ್ಟುಡಿಯೋ ಬೆಂಗಳೂರಿನಲ್ಲಿ ಮಾಡಲಾಗಿದೆ. ಈ ರೂಪಕದಲ್ಲಿ ಬರುವ ಪುರುಷ ಸಂಭಾಷಣೆಗೆ ಸುಧಾಕರ ಸುವರ್ಣ ಅವರು ಧ್ವನಿ ನೀಡಿದ್ದಾರೆ.

Exit mobile version