Site icon newsroomkannada.com

ಗೀಸರ್‌ ನಿಂದ ಗ್ಯಾಸ್‌ ಸೋರಿಕೆಯಾಗಿ ಯುವತಿ ಸಾವು

ಬೆಂಗಳೂರು: ಸ್ನಾನ ಮಾಡಲು ಬಾತ್‌ರೂಮ್‌ಗೆ ಹೋಗಿದ್ದ ಯುವತಿಯೋರ್ವಳು ಅಲ್ಲಿಯೇ ಮೃತಪಟ್ಟಿದ್ದಾಳೆ. ಬಾತ್‌ರೂಮ್‌ನಲ್ಲಿದ್ದ ಗೀಸರ್‌ನ ಗ್ಯಾಸ್‌ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ರಾಜೇಶ್ವರಿ (23) ಮೃತ ದುರ್ದೈವಿ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮೀನಾಕ್ಷಿನಗರದಲ್ಲಿ ಈ ದುರ್ಘಟನೆ ನಡೆದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ವರಿ, ಅಣ್ಣನ ಮದುವೆಗೆ ರಜೆ ಹಾಕಿದ್ದಳು. ಆದ್ರೆ, ಇಂದು(ಡಿಸೆಂಬರ್ 25) ಬೆಳಗ್ಗೆ ಸ್ನಾನ ಮಾಡಲು ಹೋದಾಗ ಗ್ಯಾಸ್ ಗೀಸರ್‌ನಿಂದ ಸೋರಿಕೆಯಾದ ವಿಷ ಅನಿಲದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.

ಬಾತ್‌ರೂಮ್‌ನಿಂದ ಹೊರಬಾರದ ಕಾರಣಕ್ಕೆ ಬಾಗಿಲು ಬಡಿದಿದ್ದಾರೆ. ಆಗಲೂ ತೆರೆಯದೇ ಇದ್ದಾಗ ಬಾತ್‌ ರೂಮ್‌ ಬಾಗಿಲು ಒಡೆದು ನೋಡಿದಾಗ ರಾಜೇಶ್ವರಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ಆದಾಗಲೇ ರಾಜೇಶ್ವರಿ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ತುಂಬ ಸಮಯ ಬಾತ್‌ ರೂಮ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾಜೇಶ್ವರಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಮದುವೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version