ಬೆಂಗಳೂರು: ಕೆಲ ದಿನಗಳ ಹಿಂದೆ ಟೊಮೆಟೋ, ಈರುಳ್ಳಿ ಶತಕ ಬಾರಿಸಿದ್ದವು. ಆದರೆ ಇದೀಗ ಗ್ರಾಹಕರಿಗೆ ಬೆಳ್ಳುಳ್ಳಿ ಶಾಕ್ ಎದುರಾಗಿದೆ. ಬೆಳ್ಳುಳ್ಳಿ ಕೆ.ಜಿಗೆ ನೂರಲ್ಲ, ಇನ್ನೂರಲ್ಲ ಬರೋಬ್ಬರಿ ಅರ್ಧ ಸಾವಿರವಾಗಿದೆ.
ರಸಂ, ಸಾಂಬರ್, ಗೋಬಿ, ನಾನ್‍ವೆಜ್ ಹೀಗೆ ಟೇಸ್ಟಿ ಟೇಸ್ಟಿಯಾದ ಅಡುಗೆ ಮಾಡಬೇಕಾದ್ರೂ ಬೆಳ್ಳುಳ್ಳಿ ಬೇಕೇ ಬೇಕು. ಬೆಳ್ಳುಳ್ಳಿ ಹಾಕೋದ್ರಿಂದ ಈ ಅಡುಗೆಗಳ ಟೇಸ್ಟ್ ಹೆಚ್ಚಾಗುತ್ತೆ. ಮಾರ್ಕೆಟ್‍ನಲ್ಲಿ ಬೆಳ್ಳುಳ್ಳಿ ಸೌಂಡ್ ಮಾಡುತ್ತಿದೆ. ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಬೆಳ್ಳುಳ್ಳಿ (Garlic Rate) ಬೆಲೆ ಸರಿಯಾಗಿ ಬಂದಿಲ್ಲ. ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಬೆಳ್ಳುಳ್ಳಿ ಕೆ.ಜಿಗೆ ಹಾಪ್ ಕಾಮ್ಸ್‍ನಲ್ಲಿ 500ರ ಗಡಿ ದಾಟಿದೆ. ಬಿಡಿಸಿದ ಬೆಳ್ಳುಳ್ಳಿ 540 ರೂ. ಆಗಿದ್ರೆ, ಉಂಡೆ ಬೆಳ್ಳುಳ್ಳಿಗೆ ಕೆ.ಜಿಗೆ 492 ರೂ. ಇದೆ.
ಬೆಳ್ಳುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ಈ ವರ್ಷ ಸರಿಯಾದ ಮಳೆಯಾಗಿಲ್ಲ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯ ಹಿನ್ನೆಲೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇಷ್ಟು ದಿನಗಳ ಕಾಲ ನಾಸಿಕ್, ಪೂನಾದಿಂದ ಬರುತ್ತಿದ್ದ ಬೆಳ್ಳುಳ್ಳಿಯ ರಫ್ತು ಕಡಿಮೆಯಾಗಿದೆ. ರಾಜ್ಯದಲ್ಲಿ ಬೆಳಗಾವಿ ಭಾಗಗಳಿಂದ ಬರೋ ಬೆಳ್ಳುಳ್ಳಿ ಸಹ ಕಡಿಮೆಯಾಗಿದೆ. ಹೀಗಾಗಿ ಬೆಳ್ಳುಳ್ಳಿ ಒಗ್ಗರಣೆ ಘಾಟು ಜೋರಾಗಿದೆ. ಬೆಳ್ಳುಳ್ಳಿ ಹೊಸ ಬೆಳೆ ಬರೋವರೆಗೂ ರೇಟ್ ಕಡಿಮೆಯಾಗೋ ಸಾಧ್ಯತೆಯಿಲ್ಲ. ಇದ್ರಿಂದಾಗಿ ಗೃಹಿಣಿಯರು ಅರ್ಧ ಕೆ.ಜಿ, ಒಂದು ಕೆಜಿ ಕೊಳ್ಳೋ ಕಡೆ 100 ಗ್ರಾಂ, 200 ಗ್ರಾಂ ಕೊಳ್ಳೋ ಹಾಗೆ ಆಗಿದೆ.