Site icon newsroomkannada.com

ಬೆಳ್ತಂಗಡಿಯಲ್ಲಿ ನವ ಗುಳಿಗ ದೈವಗಳಿಗೆ ಅಪರೂಪದ ಗಗ್ಗರ ಸೇವೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಗುಳಿಗ ದೈವಕ್ಕೆ ಗಗ್ಗರ ಸೇವೆ ನಡೆಯುವುದು ಸಾಮಾನ್ಯ. ಆದರೆ, ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಬರ್ಕಜೆಯಲ್ಲಿ ಏಕಕಾಲದಲ್ಲಿ ಒಂಬತ್ತು ಗುಳಿಗ ದೈವಗಳಿಗೆ ಗಗ್ಗರ ಸೇವೆ ನಡೆದಿದೆ. ಅಲ್ಲದೆ, ನವ ಗುಳಿಗ ದೈವಗಳಿಗೆ ಸೇವೆಯ ಜೊತೆಗೆ ಹರಕೆಯ ಸೇವೆಯೂ ಸಂಪನ್ನಗೊಂಡಿದೆ.

ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಬರ್ಕಜೆಯಲ್ಲಿರುವ ದುರ್ಗಾಪರಮೇಶ್ವರಿ ಮತ್ತು ನವ ಗುಳಿಗ ಕ್ಷೇತ್ರದಲ್ಲಿ ಒಂಬತ್ತು ಗುಳಿಗ ದೈವಗಳು ನೆಲೆ ನಿಂತಿವೆ. ವಾರ್ಷಿಕ ಉತ್ಸವದ ಹಿನ್ನೆಲೆಯಲ್ಲಿ ನವ ಗುಳಿಗ ದೈವಗಳಿಗೆ ಒಂದೇ ದಿನ ಎರಡು ಬಾರಿ (ಒಟ್ಟು 18) ಗಗ್ಗರ ಸೇವೆ ನಡೆದಿದೆ. ಆರಂಭದಲ್ಲಿ ಒಂಬತ್ತು ಗುಳಿಗ ದೈವಗಳಿಗೆ ಗಗ್ಗರದ ಸೇವೆ ನಡೆಯಿತು. ಬಳಿಕ ಹರಕೆಯ ಸೇವೆಯಾಗಿ ಮತ್ತೊಮ್ಮೆ ನವ ಗುಳಿಗ ದೈವಗಳಿಗೆ ಗಗ್ಗರ ಸೇವೆ ನಡೆಯಿತು.

ಒಟ್ಟು 18 ಬಾರಿ ಗುಳಿಗ ದೈವಗಳ ರೋಷಾವೇಷ ವೀಕ್ಷಣೆಯೊಂದಿಗೆ ದೈವಗಳ ಕೃಪೆಗೆ ಪಾತ್ರರಾದರು. ಸಾಮಾನ್ಯವಾಗಿ ಒಂದು ಗುಳಿಗ ದೈವಕ್ಕೆ ಗಗ್ಗರ ಸೇವೆ ನಡೆಯುತ್ತದೆ. ಆದರೆ ಇಲ್ಲಿ ಏಕಕಾಲದಲ್ಲಿ ಒಂಬತ್ತು ಗುಳಿಗ ದೈವಗಳಿಗೆ ಸೇವೆ ನಡೆಯುವುದು ವಿಶೇಷವಾಗಿದೆ. ದುರ್ಗಾಪರಮೇಶ್ವರಿ ದೇವಿಯ ಮುಂಭಾಗದಲ್ಲಿರುವ ನವ ಗುಳಿಗನ ಸಾನಿಧ್ಯದಲ್ಲಿ ಗಗ್ಗರದ ಸೇವೆ ನಡೆದಿದೆ.

Exit mobile version