ಮಲ್ಪೆ: ಮಂಗಳೂರಿನಲ್ಲಿ ಬಯೋಮೆಟ್ರಿಕ್ ಮತ್ತು ಆಧಾರ್ ಮಾಹಿತಿಯನ್ನು ಕದ್ದು ಆಧಾರ್ ಎನೇಬಲ್ಸ್ ಸೇಮೆಂಟ್ ಸಿಸ್ಟಂ ಎಇಪಿಎಸ್) ಮೂಲಕ ಬ್ಯಾಂಕ್ ಖಾತೆಯಿಂದ ಹಣ ದೋಚಿರುವ ಪ್ರಕರಣಗಳಿಗೆ ಸಂಬಂದಿಸಿ ಮೂವರನ್ನು ಪೊಲೀಸರು ಬಿಹಾರದಿಂದ ಬಂಧಿಸಿದ್ದಾರೆ. ಇದೀಗ ಇದೇ ಮಾದರಿಯ ವಂಚನೆ ಉಡುಪಿಯಲ್ಲೂ ನಡೆದಿರುವುದು ಬೆಳಕಿಗೆ ಬಂದಿದೆ.
ವಾರದ ಹಿಂದೆ ಮಲ್ಪೆಯಲ್ಲೂ ಹಲವು ಮಂದಿಯ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಜಾಗ ಖರೀದಿ ಸಂದರ್ಭ ಸಬ್‌ರಿಜಿಸ್ಟ್ರಾ ಕಚೇರಿಯಲ್ಲಿ ಬಯೋಮೆಟ್ರಿಕ್ ಮತ್ತು ಆಧಾರ್ ಮಾಹಿತಿ ನೀಡಿದವರಿಗೆ ಈ ಸಮಸ್ಯೆ ಎದುರಾಗಿದೆ ಎತ್ತಲಾಗುತ್ತಿದೆ. ಕೆಲವು ದಿನಗಳ ಹಿಂದೆ ಮಲ್ಪೆಯ ರಮೇಶ್ ಮೆಂಡನ್ ಅವರ ಖಾತೆಯಿಂದ 10 ಸಾವಿರ ರೂ. ವರ್ಗವಣೆಯಾದ ಬಗ್ಗೆ ಅವರ ಮೊಬೈಲಿಗೆ ಸಂದೇಶ ಬಂದಿತ್ತು. ಈ ಬಗ್ಗೆ ಸಂಬಂಧಪಟ್ಟ ಬ್ಯಾಂಕಿನಲ್ಲಿ ವಿಚಾರಿಸಿದಾಗ ಅವರ ಬೆರಳು ಮುದ್ರೆ ಬಳಸಿ ಖಾತೆಯಿಂದ ಹಣ ಡ್ರಾ ಮಾಡಲಾಗಿದೆ ಎಂದು ಮ್ಯಾನೇಜರ್ ತಿಳಿಸಿದ್ದರು.
ಇದೇ ರೀತಿ ಮಲ್ಪೆ ಹನುಮಾನ್ ನಗರದ ಧನಂಜಯ ಕಾಂಚನ್ ಅವರ ಪತ್ನಿ ಜಯಂತಿ ಅವರ ಖಾತೆಯಿಂದಲೂ ಹಣ ವರ್ಗಾವಣೆಯಾಗಿದೆ, ಅ. 19ರಂದು ಖಾತೆಯಲ್ಲಿ 24 ಸಾವಿರ ಇದ್ದು ಸಂಜೆ 7 ಗಂಟೆ ವೇಳೆಗೆ 5 ಸಾವಿರ ರೂ. ಕಡಿತಗೊಂಡಿತ್ತು. ಮರುದಿನ ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ ಹಣ ವರ್ಗಾವಣೆಯಾಗಿರುವುದು ಖಚಿತವಾಯಿತು. ತಕ್ಷಣವೇ 1 ಸಾವಿರ ರೂ.ಗಳನ್ನು ಮಾತ್ರ ಆ ಖಾತೆಯಲ್ಲಿ ಉಳಿಸಿ ಉಳಿದ 18 ಸಾವಿರವನ್ನು ಅನ್ಯ ಖಾತೆಗೆ ವರ್ಗಾಯಿಸಿದರು. ಸ್ವಲ್ಪ ಹೊತ್ತಿನ ಬಳಿಕ ಅಲ್ಲಿ ಉಳಿಸಿದ 1 ಸಾವಿರವೂ ವರ್ಗಾವಣೆಗೊಂಡು ಬ್ಯಾಲೆನ್ಸ್ ಮೊತ್ತ ಶೂನ್ಯ ಎಂದು ತೋರಿಸುತ್ತಿತ್ತು. 1ಸಾವಿರ ಕಡಿತಕ್ಕೆ ಯಾವುದೇ ಸಂದೇಶ ಕೂಡ ಬಂದಿರಲಿಲ್ಲ. ಪಾವಂಜಿಗುಡ್ಡೆಯ ದಿವಾಕರ್, ಹರೀಶ್ ಮತ್ತು ಇನ್ನೂ ಕೆಲವು ಮಂದಿಯ ಖಾತೆಯಿಂದಲೂ ಹಣ ಕಡಿತವಾಗಿರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಅವರೆಲ್ಲ ಸಂಬಂಧಪಟ್ಟ ಬ್ಯಾಂಕ್, ಪೊಲೀಸ್ ಠಾಣೆ, ಉಡುಪಿ ಸೈಬರ್ ವಿಭಾಗಕ್ಕೂ ದೂರು ನೀಡಿದ್ದಾರೆ.