main logo

ಕ್ಯಾನ್ಸರ್ ವಿರುದ್ಧ ಗೆಲ್ಲಲಾರದೆ ಬದುಕಿನ ಮೈದಾನ ತೊರೆದ ಜಿಂಬಾಬ್ವೆ ಕ್ರಿಕೆಟಿಗ ಹೀತ್ ಸ್ಟ್ರೀಕ್

ಕ್ಯಾನ್ಸರ್ ವಿರುದ್ಧ ಗೆಲ್ಲಲಾರದೆ ಬದುಕಿನ ಮೈದಾನ ತೊರೆದ ಜಿಂಬಾಬ್ವೆ ಕ್ರಿಕೆಟಿಗ ಹೀತ್ ಸ್ಟ್ರೀಕ್

ಹರಾರೆ: ಜಿಂಬಾಬ್ವೆ ತಂಡದ ಮಾಜಿ ನಾಯಕ ಮತ್ತು ಕ್ರಿಕೆಟ್ ಜಗತ್ತು ಕಂಡ ಧಿಗ್ಗಜ ಆಲ್ ರೌಂಡರ್ ಹೀತ್ ಸ್ಟ್ರೀಕ್ ಇಂದು (ಸೆ.03) ಕೊನೆಯುಸಿರೆಳೆದಿದ್ದಾರೆ. 49 ವರ್ಷ ಪ್ರಾಯದ ಈ ಕ್ರಿಕೆಟಿಗ ಕಳೆದ ಕೆಲವು ಸಮಯಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದರು.

ಕೆಲ ದಿನಗಳ ಹಿಂದೆ ಹೀತ್ ಸ್ಟ್ರೀಕ್ ಅವರು ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹರಿದಾಡಿತ್ತು. ಬಳಿಕ ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ ಹೆನ್ರಿ ಒಲಾಂಗ ಸ್ಪಷ್ಟನೆ ನೀಡಿ ಈ ಸುದ್ದಿಯನ್ನು ಅಲ್ಲಗಳೆದಿದ್ದರು. ಆದರೆ ಇದೀಗ ಸ್ಟ್ರೀಕ್ ನಿಧನದ ಸುದ್ದಿಯನ್ನು ಅವರ ಪತ್ನಿಯೇ ಖಚಿತಪಡಿಸಿದ್ದಾರೆ.

ಈ ಸುದ್ದಿಯನ್ನು ಖಚಿತಪಡಿಸಲು ಪತ್ನಿ ನಡೈನ್ ಸ್ಟ್ರೀಕ್ ತಮ್ಮ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಇದು ಸ್ಟ್ರೀಕ್ ಅಭಿಮಾನಿಗಳು ಮಾತ್ರವಲ್ಲದೇ ಕ್ರಿಕೆಟ್ ಅಭಿಮಾನಿಗಳೆಲ್ಲರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ..


‘ಇಂದು, 2023ರ ಸೆಪ್ಟೆಂಬರ್ 03ರ ಆದಿತ್ಯವಾರ ಮುಂಜಾನೆ, ನನ್ನ ಜೀವನದ ದೊಡ್ಡ ಪ್ರೀತಿ ಮತ್ತು ನನ್ನ ಚೆಂದದ ಮಕ್ಕಳ ತಂದೆ, ಅವರು ತಮ್ಮ ಕಡೇಗಾಲದಲ್ಲಿ ತನ್ನ ಪ್ರೀತಿಪಾತ್ರರ ಜೊತೆ ಬದುಕಬೇಕೆಂದುಕೊಂಡಿದ್ದ ಅವರ ಮನೆಯಿಂದ, ದೇವತೆಗಳ ಜೊತೆಯಲ್ಲಿರಲು ಕರೆದೊಯ್ಯಲ್ಪಟ್ಟರು. ಅವರು ತಾವೊಬ್ಬರೇ ಅಲ್ಲದೆ ಪ್ರೀತಿ ಮತ್ತು ಶಾಂತಿಯ ಜೊತೆಗೂಡಿ ತಮ್ಮ ಕೊನೆಯ ಪಯಣದಲ್ಲಿ ಸಾಗಿದರು.’

ನಮ್ಮ ಆತ್ಮಗಳು ಅನಂತದೊಂದಿಗೆ ಬೆಸೆಯುತ್ತವೆ ಸ್ಟ್ರೀಕಿ.. ನಿಮ್ಮ ನೆನಪುಗಳು ಸದಾ ನಮ್ಮ ಜೊತೆಯಲ್ಲಿರುತ್ತವೆ..’ ಎಂದು ನಡೈನ್ ಸ್ಟ್ರೀಕ್ ತನ್ನ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಬುಲವಾಯೋದಲ್ಲಿ ಜನಿಸಿದ್ದ ಸ್ಟ್ರೀಕ್ ಅವರು ಜಿಂಬಾಬ್ವೆ ಪರ ಅತೀ ಹೆಚ್ಚು (216) ವಿಕೆಟ್ ಗಳನ್ನು ಪಡೆದಿರುವ ಸಾಧನೆಯನ್ನು ಮಾಡಿದ್ದಾರೆ ಮಾತ್ರವಲ್ಲದೇ ಏಕದಿನ ಪಂದ್ಯಗಳಲ್ಲಿ ಸ್ಟ್ರೀಕ್ 239 ವಿಕೆಟ್ ಕಬಳಿಸಿದ್ದಾರೆ.

90ರ ದಶಕದ ಉತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರಾಗಿದ್ದ ಹೀತ್ ಸ್ಟ್ರೀಕ್ ಟೆಸ್ಟ್ ಮತ್ತು ಏಕದಿನಗಳಲ್ಲಿ ಕ್ರಮವಾಗಿ 1990 ಮತ್ತು 2943 ರನ್ ಗಳಿಸಿದರು. ಅವರು ಒಂದು ಶತಕ ಮತ್ತು 24 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

1993 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಸ್ಟ್ರೀಕ್ ಅವರು 2005 ರವರೆಗೆ ಸ್ಪರ್ಧಾತ್ಮ ಕ್ರಿಕೆಟಿನಲ್ಲಿ ಸಕ್ರಿಯರಾಗಿದ್ದರು.

ಜಿಂಬಾಬ್ವೆ ಪರ ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಸೆಪ್ಟೆಂಬರ್ 2005 ರಲ್ಲಿ ಹರಾರೆ ಸ್ಪೋರ್ಟ್ಸ್ ಕ್ಲಬ್‌ ನಲ್ಲಿ ಭಾರತದ ವಿರುದ್ಧ ಆಡಿದ್ದರು.

ಕಳೆದ ಮೇ ತಿಂಗಳಿನಲ್ಲಿ, ಸ್ಟ್ರೀಕ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮತ್ತು ದಕ್ಷಿಣ ಆಫ್ರಿಕಾದ ಪ್ರಸಿದ್ಧ ಆಂಕಾಲಿಜಿಸ್ಟ್ ಒಬ್ಬರ ಮಾರ್ಗದರ್ಶನದಲ್ಲಿ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವಿಚಾರ ಹೊರಜಗತ್ತಿಗೆ ತಿಳಿದುಬಂದಿತ್ತು.

ಐಸಿಸಿಯ ಭ್ರಷ್ಟಾಚಾರ –ನಿರೋಧ ನೀತಿಯನ್ನು ಉಲ್ಲಂಘಿಸಿದ್ದ ಕಾರಣಕ್ಕಾಗಿ ಸ್ಟ್ರೀಕ್ ಅವರನ್ನು 8 ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿಷೇಧಿಸಲಾಗಿತ್ತು. ಈ ನಿಷೇಧವನ್ನು ಒಪ್ಪಿಕೊಂಡಿದ್ದ ಸ್ಟ್ರೀಕ್, ತನ್ನ ಮೇಲಿನ ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ನಿರಾಕರಿಸಿದ್ದರು.

2014ರಲ್ಲಿ ಸ್ಟ್ರೀಕ್ ಅವರು ‘ಹೀತ್ ಸ್ಟ್ರೀಕ್ ಅಕಾಡೆಮಿ’ ಸ್ಥಾಪಿಸಿ ಆ ಮೂಲಕ ಜಿಂಬಾಬ್ವೆಯಲ್ಲಿ ಕ್ರಿಕೆಟ್ ಇನ್ನಷ್ಟು ಬೆಳೆಯಲು ಮತ್ತು ಹೊಸ ಪ್ರತಿಭೆಗಳು ಹೊರಬರಲು ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದರು.

Related Articles

Leave a Reply

Your email address will not be published. Required fields are marked *

error: Content is protected !!