ಬೈಂದೂರು: ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮರು ಸ್ಪರ್ಧೆಗೆ ಟಿಕೆಟ್ ಸಿಗದೆ ಪಕ್ಷದ ನಾಯಕರ ಮೇಲೆ ಮುನಿಸಿಕೊಂಡಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ ಎಂ ಸುಕುಮಾರ ಶೆಟ್ಟಿ ಅವರು ಇದೀಗ ಕಾಂಗ್ರೆಸ್ ಪಾಳಯ ಸೇರುವ ನಿರ್ಧಾರವನ್ನು ಮಾಡಿದ್ದಾರೆ.
‘ಮಾಜಿ ಶಾಸಕ ಗೋಪಾಲ ಪೂಜಾರಿ ಹಾಗೂ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡರ ಜೊತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಗ್ರೀನ್ ಸಿಗ್ನಲ್ ನೀಡಿದ್ದೇನೆ’ ಎಂದು ಸುಕುಮಾರ ಶೆಟ್ಟಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಬೃಹತ್ ಸಮಾರಂಭವೊಂದನ್ನು ನಡೆಸಿ ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿರುವುದಾಗಿಯೂ ಸುಕುಮಾರ ಶೆಟ್ಟಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
‘ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಬೈಂದೂರಿನಲ್ಲಿ ಕಳೆದ 10 ವರ್ಷಗಳಲ್ಲಿ ಬಿಜೆಪಿ ಗಟ್ಟಿಯಾಗಿ ತಳವೂರುವಲ್ಲಿ ನಾನು ನಿರಂತರವಾಗಿ ಶ್ರಮಿಸಿದ್ದೆ. ಆದರೆ, ಬಿಜೆಪಿಯವರು ಯಾರನ್ನೂ ಬೆಳೆಯಲು ಬಿಡುವುದಿಲ್ಲ, ಕಾಲೆಳೆದು ಮುಗಿಸುವ ಕೆಲಸ ಮಾಡುತ್ತಾರೆ’ ಎಂದು ಸುಕುಮಾರ ಶೆಟ್ಟಿ ಅವರು ಬಿಜೆಪಿ ನಾಯಕರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
‘ಈ ಬಾರಿ ನನಗೆ ಸೀಟು ಕೊಡದೇ ಇದ್ದ ಕಾರಣ ನನಗೆ ನೋವಾಗಿತ್ತು. ಬಿಜೆಪಿಗೆ ಭವಿಷ್ಯ ಇಲ್ಲ, ಇದುವರೆಗೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಲಿಲ್ಲ. ಕರಾವಳಿಯಲ್ಲಿ ಹಿಂದುತ್ವದ ನೆಲೆಯಲ್ಲಿ ಸ್ವಲ್ಪ ಹೆಸರಿದೆ, ಆದರೆ ರಾಜ್ಯದಲ್ಲಿ ಬಿಜೆಪಿ ಹೆಸರು ಹಾಳುಮಾಡಿಕೊಂಡಿದೆ..’ ಎಂದು ಸುಕುಮಾರ ಶೆಟ್ಟಿ ಅವರು ಇದೇ ಸಂದರ್ಭದಲ್ಲಿ ಕೇಸರಿ ಪಕ್ಷದ ವಿರುದ್ಧ ಕಿಡಿಕಾರಿದರು.