ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಳಂಜದಲ್ಲಿ, ಹಲವಾರು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ವಾಸವಿದ್ದ ಕುಟುಂಬವನ್ನು ಒಕ್ಕಲೆಬ್ಬಿಸಲು ಬಂದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರು ಒಟ್ಟಾಗಿ ತರಾಟೆಗೆತ್ತಿಕೊಂಡ ಘಟನೆ ಸಂಭವಿಸಿದೆ.
ಕಳಂಜ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ನೆಲೆಸಿರುವ ಧರ್ಮಣ್ಣ ಗೌಡ ಎಂಬವರಿಗೆ ಸೇರಿದ ಮನೆ ತೆರವಿಗೆ ಅಧಿಕಾರಿಗಳು ಸೋಮವಾರ ಬಂದಿದ್ದರು. ಈ ವೇಳೆ ಆಗಮಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡಿದ್ದಾರೆ. ಹಲವು ವರ್ಷಗಳಿಂದ ಮನೆ ನಿರ್ಮಿಸಿ, ಕೃಷಿ ನಡೆಸುತ್ತಿರುವ ಕೃಷಿಕರ ಮೇಲೆ ನೀವು ದಬ್ಬಾಳಿಕೆ ನಡೆಸಿ ಜಾಗ ತೆರವಿಗೆ ಮುಂದಾಗಿದ್ದೀರಿ ಎಂದು ಮುಖಂಡರು ಆಕ್ರೋಶಗೊಂಡರು.
ಇದೇ ವಿಚಾರವಾಗಿ ಕಳೆದ ಕೆಲ ದಿನಗಳ ಹಿಂದೆ ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಅಲ್ಲದೆ ಜಾಗ ತೆರವು ಮಾಡದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಫೋನ್ ಮೂಲಕ ಆಗ್ರಹಿಸಿದ್ದರು. ಇದಕ್ಕೆ ಕ್ಯಾರೇ ಎನ್ನದ ಅಧಿಕಾರಿಗಳು ಸೋಮವಾರ ಮತ್ತೆ ಮನೆ ತೆರವಿಗೆ ಮುಂದಾಗಿದ್ದರು ಎಂದು ತಿಳಿದುಬಂದಿದೆ.