ಉಡುಪಿ: ಬೋಟ್ ಚಾಲಕನ ನಿರ್ಲಕ್ಷ್ಯದಿಂದ ಮೀನುಗಾರನೊಬ್ಬ ನೀರಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ನಡೆದಿದೆ. ಒಡಿಶಾ ಮೂಲದ ಅಭಿಮನ್ಯು ಮಲಿಕ್ (36) ಕಳೆದ ಮೂರು ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದರು. ಇವರು ಸೆ.12ರಂದು ರಾತ್ರಿ ಮಲ್ಪೆ ಬಂದರಿನಿಂದ ನವರತ್ನ ದೋಣಿಯಲ್ಲಿ ಇತರ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ್ದರು. ಬೋಟ್‌ನಲ್ಲಿದ್ದವರೆಲ್ಲರೂ ಸೆ.13 ರಂದು ರಾತ್ರಿ ಮಲಗಿದ್ದರು.ಬೋಟ್ ಚಾಲಕ ಅಲೆಗಳ ದಿಕ್ಕಿಗೆ ವಿರುದ್ಧವಾಗಿ ಬೋಟ್ ಅನ್ನು ಚಾಲನೆ ಮಾಡಿದ್ದರಿಂದ ಅಭಿಮನ್ಯು ಸಮತೋಲನ ತಪ್ಪಿ ನೀರಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಸೆ. 18ರಂದುಅಭಿಮನ್ಯು ಸಹೋದರ ಸುಶಾಂತ್ ಮಲಿಕ್ ಮಲ್ಪೆ ಠಾಣೆಗೆ ದೂರು ನೀಡಿದ್ದು, ದೋಣಿ ಚಾಲಕನ ನಿರ್ಲಕ್ಷ್ಯ ಮತ್ತು ಆತುರದಿಂದ ತನ್ನ ಸಹೋದರ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.