ಇರಾಕ್: ಇರಾಕ್ ನಲ್ಲಿ ಘೋರ ದುರಂತವೊಂದು ನಡೆದು ಹೋಗಿದೆ. ಉತ್ತರ ಇರಾಕ್ನ ಹಮ್ದುನಿಯಾಹ್ ಪಟ್ಟಣದ ಈವೆಂಟ್ ಹಾಲ್ನಲ್ಲಿ ಮದುವೆ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 100 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೊಸುಲ್ ನಗರದ ಹೊರ ವಲಯದಲ್ಲಿ ಈ ಅಗ್ನಿ ದುರಂತ ಸಂಭವಿಸಿದೆ, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟಾಕಿ ಸಿಡಿಸುವಾಗ ಮದುವೆ ಮಂಟಪಕ್ಕೆ ಬೆಂಕಿ ತಗುಲಿ ದುರಂತ ಸಂಭವಿಸಿದೆ. ಮದುವೆ ಕಾರ್ಯಕ್ರಮದಲ್ಲಿ 700 ಮಂದಿ ಭಾಗಿಯಾಗಿದ್ದರು.\
ನೆವೆಹ್ ಪ್ರಾಂತ್ಯವು ಮೊಸುಲ್‌ನ ಹೊರಗೆ ರಾಜಧಾನಿ ಬಾಗ್ದಾದ್‌ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ (205 ಮೈಲಿ) ದೂರದಲ್ಲಿದೆ. ಇರಾಕಿನ ಸುದ್ದಿ ಸಂಸ್ಥೆ ನೀನಾ ವರದಿಯ ಪ್ರಕಾರ, ಈ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ವಧು-ವರರು ಕೂಡ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆದರೆ ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಪಟಾಕಿ ಸುಟ್ಟಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇರಾಕಿನ ಸುದ್ದಿ ಸಂಸ್ಥೆ ನೀನಾ ಪೋಸ್ಟ್ ಮಾಡಿದ ಚಿತ್ರದಲ್ಲಿ, ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವ ಕೆಲಸ ಮಾಡುತ್ತಿದ್ದಾರೆ.