ಚಿಕ್ಕಮಗಳೂರು: 6 ಎಕರೆ ಕಾಫಿತೋಟ ಸಂಪೂರ್ಣ ಭಸ್ಮವಾದ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಬಿಗ್ಗನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ರಾತ್ರೋರಾತ್ರಿ ಆರು ಎಕರೆ ಕಾಫಿತೋಟ ಸುಟ್ಟು ಕರಕಲಾಗಿದೆ. ಕಾಫಿ ತೋಟದ ಮಧ್ಯೆ ಎಳೆಯಲಾಗಿದ್ದ ವಿದ್ಯುತ್ ತಂತಿ ಗಾಳಿಗೆ ಒಂದಕ್ಕೊಂದು ತಾಗಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿತ್ತು. ಪರಿಣಾಮವಾಗಿ ಇಡೀ ಕಾಫಿ ತೋಟಕ್ಕೆ ಬೆಂಕಿ ವ್ಯಾಪಿಸಿದೆ ಎಂಬ ಆರೋಪ ಕೇಳಿಬಂದಿದೆ. ಅಗ್ನಿ ಅವಘಡದಿಂದ ಕಾಫಿ ತೋಟದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೆಣಸು, ಅಡಿಕೆ, ಬಾಳೆ, ಕಾಫಿ ಗಿಡ ನಾಶವಾಗಿವೆ. ಬಿಗ್ಗನಹಳ್ಳಿ ಗ್ರಾಮದ ತೇಜಸ್ ಗೌಡ ಎಂಬುವವರಿಗೆ ಸೇರಿದ ಕಾಫಿತೋಟ ನಾಶವಾಗಿದೆ.
ತೋಟದ ಮಧ್ಯೆ ಹಾಕಿದ್ದ ಪವರ್ ಲೈನ್ ಕಂಬಗಳನ್ನು ತೆರವು ಮಾಡುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಕಳೆದ 10 ವರ್ಷಗಳಿಂದ ಮನವಿ ಮಾಡಿದರೂ ಮೆಸ್ಕಾಂ ಸ್ಪಂದಿಸಿರಲಿಲ್ಲ ಎಂಬ ಆರೋಪ ಇದೀಗ ಕೇಳಿಬಂದಿದೆ.