Site icon newsroomkannada.com

Video: ಬಹುಮಹಡಿ ಕಟ್ಟಡದ ಪಬ್‌ ನಲ್ಲಿ ಅಗ್ನಿದುರಂತ- ಪ್ರಾಣ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಜಿಗಿದ ವ್ಯಕ್ತಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಬುಧವಾರ ಮತ್ತೊಂದು ಅಗ್ನಿದುರಂತ ಸಂಭವಿಸಿದೆ. ಕೋರಮಂಗಲ ಸಮೀಪದ ತಾವರಕೆರೆ ಮುಖ್ಯರಸ್ತೆಯಲ್ಲಿರುವ ಪಬ್‌ ವೊಂದರಲ್ಲಿ ಸಿಲಿಂಡರ್‌ ಸ್ಟೋಟದಿಂದ ಅಗ್ನಿ ದುರಂತ ಸಂಭವಿಸಿದ್ದು, ಕಟ್ಟಡದ ನಾಲ್ಕನೇ ಮಹಡಿ ಸಂಪೂರ್ಣ ಹೊತ್ತಿ ಉರಿದಿದೆ.

ಕೋರಮಂಗಲದ ಮಡ್‌ ಪೈಪ್ ಹುಕ್ಕಾ ಪಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದಲ್ಲಿ ಧುತ್ತೆಂದು ಬೆಂಕಿ ಹತ್ತಿ ಉರಿಯಲಾರಂಭಿಸಿದ್ದು, ಪ್ರಾಣ ಉಳಿಸಿಕೊಳ್ಳಲು ವ್ಯಕ್ತಿಯೊರ್ವ ನಾಲ್ಕನೇ ಮಹಡಿಯಿಂದ ಜಿಗಿದಿದ್ದಾರೆ.

ಕಟ್ಟಡದ ನಾಲ್ಕನೇ ಮಹಡಿ ಸಂಪೂರ್ಣ ಹೊತ್ತಿ ಉರಿದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಗುತಿಯಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ಆರಿಸಲು ಹರಸಾಹಸಪಟ್ಟಿದ್ದಾರೆ.ಈ ಪ್ರದೇಶದಲ್ಲಿದ್ದ ಜನರಿಗೆ ಸ್ಫೋಟದ ಶಬ್ಧ ಕೇಳಿಸಿದೆ. ಕಟ್ಟಡದಿಂದ ದಟ್ಟ ಹೊಗೆ ಆವರಿಸಿದೆ.

ಕಟ್ಟಡದ ಮೇಲಿನ ಮಹಡಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಕಟ್ಟಡದ ಮೇಲ್ಬಾಗದಲ್ಲಿ ಐದಾರು ಗ್ಯಾಸ್ ಗಳನ್ನು ಇಡಲಾಗಿತ್ತು ಎನ್ನಲಾಗಿದ್ದು, ಸಿಲಿಂಡರ್ ಸ್ಫೋಟದಿಂದ ಧಗಧಗನೆ ಕಟ್ಟಡ ಹೊತ್ತಿ ಉರಿದಿದೆ.

ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಸದ್ಯ ಸಮೀಪದ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಜನರ ರಕ್ಷಣೆಗೆ ಧಾವಿಸಿದೆ.

Exit mobile version