ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ಮಗು ಮೇಲೆ ತಾಯಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾಯಿ ಹಾಗೂ ಬಾಯ್ ಫ್ರೆಂಡನ್ನು ಗಿರಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ತಾಯಿ ಶಾರಿನ್ ಹಾಗೂ ಪ್ರಿಯಕರ ದಿನೇಶ್‌ನನ್ನು ಬಂಧಿಸಿ ಎಫ್‌ಐಆರ್ ಹಾಕಲಾಗಿದೆ.
ಚೈಲ್ಡ್ ವೆಲ್ ಫೇರ್ ಕಮಿಟಿ ಅಧಿಕಾರಿ ನಾಗರತ್ನ ನೀಡಿದ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ. ಇಬ್ಬರನ್ನ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.ಬಾಯ್ ಫ್ರೆಂಡ್ ದಿನೇಶ್ ಜೊತೆ ಸೇರಿ ತಾಯಿ ಶಾರಿನ್ ತನ್ನ ಮೂರುವರೆ ವರ್ಷದ ಮಗುವಿನ ಮೇಲೆ ದಿನನಿತ್ಯ ಹಲ್ಲೆ ಮಾಡುತ್ತಾ ಬಂದಿದ್ದಳು. ತಾಯಿಯ ಹಲ್ಲೆಯಿಂದ ಮಗುವಿನ ದೇಹದ ಮೇಲೆಲ್ಲಾ ಗಾಯಗಳಾಗಿತ್ತು. ಅಷ್ಟು ಮಾತ್ರವಲ್ಲದೆ ತಾಯಿ ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮಗುವನ್ನು ಮನೆಯಲ್ಲಿ ಬಿಟ್ಟು ಬೀಗ ಹಾಕಿ ಹೋದರೆ, ರಾತ್ರಿ ಬರೋವರೆಗೂ ಕೂಡಿ ಹಾಕಿರೋದು ಬೆಳಕಿಗೆ ಬಂದಿತ್ತು.
ಶಾರಿನ್ ಗೆ ಶಂಕರ್ ಎಂಬಾತನ ಜೊತೆಗೆ ವಿವಾಹವಾಗಿದ್ದು,ಆಕೆ ಗಂಡನ ಜೊತೆಗೆ ವಾಸಿಸುತ್ತಿರಲಿಲ್ಲ. ಹಣಕಾಸಿನ ತೊಂದರೆಯಿಂದ ಮಗುವನ್ನ ಮನೆಯಲ್ಲೇ ಕೂಡಿಹಾಕಿ ಹೋಗುತ್ತಿದ್ದಳು. ಕೆಲಸ ಹುಡುಕಲು ಮನೆಯಲ್ಲಿ ಮಗುವನ್ನ ಬಿಟ್ಟು ಹೋಗಿರುವುದಾಗಿ ಹೇಳಿದ್ದಾಳೆ.ಇನ್ನು ಮಧ್ಯಾಹ್ನ ಮಗುವಿಗೆ ಊಟ ಕೊಡೋಕೆ ಅಂತಾ ಮಹಿಳೆಯ ಫ್ರೆಂಡ್ ಮನೆಗೆ ಬರುತ್ತಿದ್ದನಂತೆ. ಆದರೆ ಮಗುವಿನ ಮೈಮೇಲೆಲ್ಲಾ ಪೂರ್ತಿ ಗಾಯಗಳಾಗಿದ್ದು, ತಾಯಿ ಮತ್ತು ಅಂಕಲ್ ನನಗೆ ಹಲ್ಲೆ ಮಾಡುವುದಾಗಿ ಮಗು ಹೇಳಿಕೊಂಡಿದೆ.ಇನ್ನು ಈ ಘಟನೆ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗವೇಣಿ ಮಗುವಿನ ರಕ್ಷಣೆ ಮಾಡಿದ್ದಾರೆ. ಸದ್ಯ ಶಿಶು ಮಂದಿರದಲ್ಲಿ ಮಗುವಿನ ಪಾಲನೆ ಮಾಡಲಾಗುತ್ತಿದೆ.