ಬೆಂಗಳೂರು: ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪಅವರ ಪುತ್ರ ಆ್ಯಡಂ ಬಿದ್ದಪ್ಪನ ಮೇಲೆ ಇನ್ನೊಂದು ಕೇಸ್ ದಾಖಲಾಗಿದೆ. ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ ರಸ್ತೆಯಲ್ಲಿ ಗಲಾಟೆ ಎಬ್ಬಿಸಿದ್ದಕ್ಕಾಗಿ ಈತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮೊನ್ನೆ ರಾತ್ರಿ ಯಲಹಂಕದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಹೈಡ್ರಾಮಾ ಎಬ್ಬಿಸಿದ್ದಾನೆ ಆ್ಯಡಂ ಬಿದ್ದಪ್ಪ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ, ಎರಡೂ ವಿಭಾಗದ ಪೊಲೀಸರು ಬಂದರೂ ಈತನನ್ನು ಹತೋಟಿಗೆ ತರಲು ಸಾಧ್ಯವಾಗಿಲ್ಲ.
ಆ್ಯಡಂ ಬಿದ್ದಪ್ಪ ಕಂಠಪೂರ್ತಿ ಕುಡಿದು ರ್ಯಾಶ್ ಆಗಿ ಚಲಾಯಿಸುತ್ತಿದ್ದು, ಈ ವೇಳೆ ಹಿಂದಿನಿಂದ ರಾಹುಲ್ ಎಂಬವರು ದಾರಿ ಬಿಡುವಂತೆ ಕಾರ್ ಹಾರನ್ ಮಾಡಿ ಕೇಳಿದ್ದಾರೆ. ಅಷ್ಟಕ್ಕೇ ರೋಡ್ ಬ್ಲಾಕ್ ಮಾಡಿ ಆ್ಯಡಂ ಗಲಾಟೆ ಎಬ್ಬಿಸಿದ್ದಾನೆ. ಕೂಡಲೇ ರಾಹುಲ್ ಪೊಲೀಸ್ ಎಮರ್ಜೆನ್ಸಿ ಸಂಖ್ಯೆ 112ಕ್ಕೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರ ಜೊತೆ ಸಹ ಅ್ಯಡಂ ಬಿದ್ದಪ್ಪ ಕೂಗಾಡಿದ್ದಾನೆ. ಯಲಹಂಕ ಸಂಚಾರಿ ಪೊಲೀಸರು ಸಹ ಸ್ಥಳಕ್ಕೆ ಬಂದಿದ್ದು, ಪರಿಶೀಲಿಸಲಾಗಿ ಆ್ಯಡಂ ಕಂಠಪೂರ್ತಿ ಕುಡಿದಿರುವುದು ಪತ್ತೆಯಾಗಿದೆ. ಈ ವೇಳೆ ಯಲಹಂಕ ಸಂಚಾರಿ ಪೊಲೀಸರು ಆತನ ಕಾರ್ ಸೀಜ್ ಮಾಡಿದ್ದಾರೆ. ಬಳಿಕ ಆ್ಯಡಂನನ್ನು ಯಲಹಂಕ ನ್ಯೂಟೌನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಹುಲ್ ದೂರಿನ ಹಿನ್ನೆಲೆಯಲ್ಲಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದುರ್ವರ್ತನೆ ದೂರು ದಾಖಲಾಗಿದೆ. ಮದ್ಯ ಸೇವಿಸಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಪ್ರಕರಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆ್ಯಡಂನನ್ನು ವಶಕ್ಕೆ ಪಡೆದು ಮೆಡಿಕಲ್ ಚೆಪ್ ಮಾಡಿಸಲಾಗಿದೆ. ಈ ವೇಳೆ ಸಹ ಆತ ಗಲಾಟೆ ಎಬ್ಬಿಸಿದ್ದಾನೆ.
ಕಳೆದ ವರ್ಷ ಈತ ಕನ್ನಡ ಚಿತ್ರನಟಿಯೊಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದು ಸುದ್ದಿಯಾಗಿತ್ತು. ಆಕೆ ಕೇಸು ದಾಖಲಿಸಿದ್ದು, ಪೊಲೀಸರು ಆಡಂನನ್ನು ಬಂಧಿಸಿದ್ದರು. ನಂತರ ಈತ ಜಾಮೀನಿನ ಮೇಲೆ ಹೊರಗೆ ಬಂದಿದ್ದ.