Site icon newsroomkannada.com

ಮಗಳ ಮದುವೆ ನಡೆದಿದ್ದ ‘ಫೈವ್ ಸ್ಟಾರ್’ ಹೊಟೇಲ್ ನಲ್ಲೇ ಸಾವಿಗೆ ಶರಣಾದ ಹೆತ್ತವರು!

ತಿರುವನಂತಪುರ: ಇದಕ್ಕಿಂತ ದೊಡ್ಡ ದುರಂತ ಇನ್ನೊಂದಿರಲಿಕ್ಕಿಲ್ಲವೆನ್ನಬಹುದೇನೋ!

ಕೆಲವೇ ತಿಂಗಳುಗಳ ಹಿಂದಷ್ಟೇ ತಮ್ಮ ಪ್ರೀತಿಯ ಮಗಳ ವಿವಾಹವನ್ನು ಅದ್ದೂರಿಯಾಗಿ ನಡೆಸಿಕೊಟ್ಟಿದ್ದ ಫೈವ್ ಸ್ಟಾರ್ ಹೊಟೇಲಿನ ಕೊಠಡಿಯೊಂದರಲ್ಲೇ ಆ ಯುವತಿಯ ಹೆತ್ತವರು ನೇಣಿಗೆ ಶರಣಾಗಿರುವ ದಾರುಣ ಘಟನೆ ನೆರೆಯ ಕೇರಳದಲ್ಲಿ ನಡೆದಿದೆ.

ಇಲ್ಲಿನ ತಿರುವನಂತಪುರದಲ್ಲಿರುವ ಫೈವ್ ಸ್ಟಾರ್ ಹೊಟೇಲೊಂದರಲ್ಲಿ ಈ ದುರಂತ ಘಟನೆ ನಡೆದಿದ್ದು, ಮಸ್ಕತ್ ನಲ್ಲಿ ಉದ್ಯಮಿಯಾಗಿದ್ದು ಬಳಿಕ ತಾಯ್ನಾಡಿಗೆ ಮರಳಿದ್ದ ಸುಗಥನ್ (70) ತನ್ನ ಪತ್ನಿ ಸುನೀಲ (60) ಜೊತೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸುಗಥನ್ ಮತ್ತು ಸುನೀಲ ಅವರು ಇದೇ ಹೊಟೇಲ್ ನಲ್ಲಿ ಕೆಲ ದಿನಗಳ ಹಿಂದಷ್ಟೇ ಖುಷಿಯಿಂದ ಎಲ್ಲರೊಂದಿಗೆ ಸೇರಿ ಓಣಂ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು ಮತ್ತು ಸಾಂಪ್ರದಾಯಿಕ ಉಡುಗೆ ಧರಿಸಿ ಓಣಂ ವಿಶೇಷ ಖಾದ್ಯ ‘ಸದ್ಯ’ವನ್ನು ಸಹ ಸವಿದಿದ್ದಿರು.

ವ್ಯವಹಾರದಲ್ಲಿ ನಷ್ಟ ಮತ್ತು ಇದರಿಂದುಂಟಾದ ತೀವ್ರ ಆರ್ಥಿಕ ಸಂಕಷ್ಟವೇ ಈ ಘಟನೆಗೆ ಕಾರಣವೆಂದು ಆತ್ಮಹತ್ಯೆ ಸ್ಥಳದಲ್ಲಿ ಸಿಕ್ಕಿರುವ ಡೆತ್ ನೋಟ್ ನಿಂದ ತಿಳಿದುಬಂದಿದೆ.

ಈ ಫೈವ್ ಸ್ಟಾರ್ ಹೊಟೇಲಿನಲ್ಲಿ ಕೋಣೆಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದ ಸುಗಥನ್ ದಂಪತಿ ತಮ್ಮ ಕೋಣೆಯಿಂದ ಹೊರಬಾರದೇ ಇದ್ದಾಗ ಅನುಮಾನಗೊಂಡ ಹೊಟೇಲ್ ಸಿಬ್ಬಂದಿ ಇವರಿದ್ದ ಕೋಣೆಯ ಬಾಗಿಲನ್ನು ತೆರೆದು ನೋಡಿದಾಗ ಈ ದಂಪತಿ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.

ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ, ‘ನಮ್ಮ ಮಗಳನ್ನು ಇದೇ ಹೊಟೇಲ್ ನಲ್ಲಿ ಮದುವೆ ಮಾಡಿ ಕೊಡಲಾಗಿತ್ತು. ಸದ್ಯಕ್ಕೆ ಆಕೆ ಗರ್ಭಿಣಿಯಾಗಿದ್ದಾಳೆ. ಸಂತೋಷದಿಂದ ಇರುವ ಆಕೆಯಲ್ಲಿ ನಮ್ಮ ಕಷ್ಟಗಳನ್ನು ಹೇಳಿಕೊಂಡು ತೊಂದರೆ ನೀಡಲು ಇಷ್ಟವಿಲ್ಲ. ನಮ್ಮ ಸಾವಿಗೆ ನಾವೇ ಕಾರಣವಾಗಿದ್ದು, ನಮ್ಮ ಸಾವಿನ ಬಳಿಕ ಈ ವಿಷಯದಲ್ಲಿ ಆಕೆಗೆ ಯಾವುದೇ ತೊಂದರೆ ನೀಡಬೇಡಿ ಮತ್ತು ನಮ್ಮ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ಒಪ್ಪಿಸಿ’ ಎಂದು ಬರೆಯಲಾಗಿದೆ.

ಹಿಂದೆ ಆರ್ಥಿಕವಾಗಿ  ಸದೃಢರಾಗಿದ್ದ ಸುಗಥನ್ ಕುಟುಂಬಕ್ಕೆ ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಮಸ್ಕತ್ ನಿಂದ ವಾಪಾಸು ಬಂದಿದ್ದ ಅವರು ಇಲ್ಲಿನ ಕರಿಪುರ ಪ್ರಕೃತಿ ಗಾರ್ಡನ್ ನಲ್ಲಿ ಮನೆಯೊಂದರ ಮೇಲೆ 65 ಲಕ್ಷ ರೂಪಾಯಿಗಳಷ್ಟು ಹೂಡಿಕೆ ಮಾಡಿದ್ದರು. ಆದರೆ, ಪುತ್ರಿಯ ವಿವಾಕ್ಕಾಗಿ ಈ ಮನೆಯನ್ನು ಅವರು ಕಡಿಮೆ ಬೆಲೆಗೆ ಅಂದರೆ ಸುಮಾರು 35 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಇದರಿಂದ ಸುಗಥನ್  ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು ಮತ್ತು ಪುತ್ರಿಯ ವಿವಾಹದ ಬಳಿಕ ಮಾನಸಿಕ ಖಿನ್ನತೆಗೂ ಒಳಗಾಗಿದ್ದರು ಎನ್ನಲಾಗಿದೆ.

ಇದೆಲ್ಲದರಿಂದಾಗಿ ಸುಗಥನ್ ದಂಪತಿ ತಮ್ಮ ಜೀವನವನ್ನು ಕೊನೆಗೊಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದು, ಇದೀಗ ಇವರ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರಬಹುದಾದ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version