– ಭರತ್ ರಾಜ್ ಸೊರಕೆ
ಇಲ್ನೋಡಿ ಈತ ‘ಕೆಮ್ಮಯಿರೆ ಮೈಪೆ ‘, ಪಕ್ಕದಲ್ಲಿದ್ದಾನಲ್ಲ ಆತ ‘ಉರಿಯೆ’, ಅಲ್ನೋಡಿ ಉರಿಯ ಪಂಚಮಿ, ಫೈಟಿಗೆ ಸಿದ್ದನಾಗಿ ಕೆರಳಿದ್ದಾನಲ್ಲ ಅವ ‘ಕರ್ಬೊಲ್ಲೆ’, ಬಿಳಿಯಾಳಿಯಾಗಿ ಮಿಂಚುತ್ತಿದ್ದಾನೆ ‘ಬೊಲ್ಲೆ’, ಸ್ವಲ್ಪ ನೀಲಿ ಇದ್ದಾನೆ ನೋಡಿ ‘ನೀಲ’ …
-ಮಂಗಳೂರು ಸಮೀಪದ ಗಂಜಿ ಮಠ ಬರ್ಕೆ ಮನೆಯ ವಿನಯ ರೈಗಳು ಕೋಳಿಗಳಿಗೆ ಊಟ ಹಾಕುತ್ತಾ ಫೈಟರ್ ಹುಂಜಗಳ ಬಣ್ಣದ ವರ್ಣನೆ ಕೇಳುವುದೇ ಚಂದ.
ರೈಗಳು ಕೋಳಿಗಳಿಗೆ ಬಕೆಟ್ ನಲ್ಲಿ ಆಹಾರ ಹೊತ್ತು ತೋಟದ ಮಧ್ಯೆ ನಡೆಯುತ್ತಿದ್ದರೆ, ಹಿಂದಿನಿಂದ ಪಟ ಪಟ ಓಡುವ ಹುಂಜಗಳ ಹಿಂಡು ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ನೆನಪು ಮಾಡುತ್ತದೆ.
ಬರ್ಕೆ ಮನೆಯಲ್ಲಿ ಫೈಟರ್ ಕೋಳಿ ಸಾಕಾಣಿಕೆ ಶುರುವಾಗಿದ್ದು ಎಂಟು ವರ್ಷಗಳ ಹಿಂದೆ ತಮಿಳುನಾಡಿನಿಂದ ತಂದ ಒಂದು ಹೆಂಟೆಯಿಂದ. ಬಳಿಕ ಮರಿ ಮಾಡಿಸಿ, ದ್ವಿಗುಣಗೊಳಿಸಿದ್ದಾರೆ. ಸಾವಿರಾರು ಕೋಳಿಗಳು ಗ್ರಾಹಕರ ಕೈಸೇರಿ ಪಡೆಯಲ್ಲಿ ಹೋರಾಡಿವೆ.
ಈಗ ಬರ್ಕೆ ಮನೆಯಲ್ಲಿರುವ ಫೈಟರ್ ಹುಂಜಗಳ ಸಂಖ್ಯೆ 750 ಮೀರಿದೆ. ತೋಟದ ಯಾವ ಮೂಲೆಗೆ ಕಿವಿಕೊಟ್ಟರೂ ಕೊ ಕ್ಕೋ ಕ್ಕೋ ಧ್ವನಿ.
ಕೋಳಿಗಳನ್ನು ವೈಜ್ಞಾನಿಕ ಮಾಹಿತಿಯೊಂದಿಗೆ ನೈಸರ್ಗಿಕವಾಗಿ ಬೆಳೆಸುತ್ತಿರುವುದು ವಿಶೇಷ. ಇದಕ್ಕಾಗಿಯೇ ತೋಟದ ಮಧ್ಯೆ ಅಲ್ಲಲ್ಲಿ ಏಳೆಂಟು ಶೆಡ್ಡುಗಳನ್ನು ಮಾಡಿದ್ದಾರೆ. ಒಂದು ಶೆಡ್ ನಲ್ಲಿ ಹೆಂಟೆ ಮತ್ತು ಹುಂಜನ್ನು ಕೂಡಿಹಾಕಿದ್ದರೆ, ಇನ್ನೊಂದೆಡೆ ಹೆಂಟೆ ಮೊಟ್ಟೆ ಇಟ್ಟು ಕಾವು ಕೊಡಲು ಬುಟ್ಟಿಗಳನ್ನು ತೂಗು ಹಾಕಲಾಗಿದೆ. ಮತ್ತೊಂದೆಡೆ ದೊಡ್ಡದಾದ ಮರಿಗಳನ್ನು ಪ್ರತ್ಯೇಕಿಸಲಾಗಿದೆ. ಅಲ್ಲಿಂದ ಸದೃಢ ಕೋಳಿಗಳನ್ನು ಬೇರ್ಪಡಿಸಿ ತೋಟಕ್ಕೆ ಬಿಟ್ಟು ಬೆಳೆಸುತ್ತಾರೆ.
ಕೋಳಿಗಳು ತೋಟ ಬಿಟ್ಟು ಹೊರ ಹೋಗದಂತೆ ಸುತ್ತ ನೆಟ್ ಅಳವಡಿಸಿದ್ದಾರೆ. ತೋಟ ಸುತ್ತಿ, ಆಹಾರ ಕೆದಕಿ ತಿನ್ನುವ ಕೋಳಿಗಳು ರಾತ್ರಿಯಾಗುತ್ತಿದ್ದಂತೆ ಮತ್ತೆ ಗೂಡಿಗೆ. ಅವುಗಳ ಹಿಕ್ಕೆ ನೇರ ಕಂಗಿನ ಬುಡಕ್ಕೆ. ಕೋಳಿಗಳು ನೆಲದಲ್ಲಿ ಕಳೆ ಗಿಡಗಳನ್ನೂ ಬಿಡದೆ ತಿನ್ನುತ್ತವೆ.
ಫೈಟರ್ ಕೋಳಿಗಳಿಗೆ ಈಜು ತರಬೇತಿ:
ಅಂಕದ ಹುಂಜ ಎದುರಾಳಿ ಜತೆ ಸೆಣಸಾಡಲು ಆಹಾರ ಮಾತ್ರ ಸಾಕಾಗುವುದಿಲ್ಲ. ವ್ಯಾಯಾಮ, ತರಬೇತಿಯೂ ಬೇಕು ಎನ್ನುತ್ತಾರೆ ವಿನಯರು. ಇದಕ್ಕಾಗಿ ಪ್ರತಿ ದಿನ ಅಂಕಕ್ಕೆ ಸಿದ್ಧವಾದ ಕೋಳಿಗಳಿಗೆ ಕೆರೆಯಲ್ಲಿ ಈಜು ತರಬೇತಿ ನೀಡಲಾಗುತ್ತದೆ. ಅವುಗಳ ರೆಕ್ಕೆ- ಪುಕ್ಕಗಳನ್ನು ಸವರಿ, ಫೈಟ್ ಮಾಡಿಸಿ ಪಡೆಗೆ ಸಿದ್ಧಗೊಳಿಸುತ್ತಾರೆ.
ಉಡುಪಿ, ದಕ್ಷಿಣ ಕನ್ನಡ ಮಾತ್ರವಲ್ಲ ಮುಂಬೈನಿಂದಲೂ ಇವರಿಗೆ ಗ್ರಾಹಕರಿದ್ದಾರೆ. ಮನೆ ಮಂದಿಯೆಲ್ಲ ಒಟ್ಟಾಗಿ ಕೋಳಿ ಸಾಕಾಣಿಕೆಗೆ ದುಡಿಯುತ್ತಾರೆ.
ಈಗ ಫೈಟರ್ ಕೋಳಿಗಳಿಗೆ ರೇಟ್ ಎಷ್ಟಿರಬಹುದು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಕೋಳಿಗಳು ಹೋರಾಡುವ ಸಾಮರ್ಥ್ಯವನ್ನು ಪರಿಶೀಲಿಸಿ ದರ ನಿಗದಿ. 5 ಸಾವಿರದಿಂದ 12 ಸಾವಿರ !!!
(ವಿನಯ್ ಬರ್ಕೆ ಮೊಬೈಲ್: 6361346998)