ಉಡುಪಿ: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದಕ್ಕಾಗಿ ದೆಹಲಿ, ನೋಡ್ಡಾದಂತಹ ನಗರಗಳಲ್ಲಿ ಫೇಕ್ ಕಾಲ್ ಸೆಂಟರ್ಗಳನ್ನು ತೆರೆದು ಅಮಾಯಕರನ್ನು ವಂಚಿಸುವ ಬೃಹತ್ ಜಾಲಗಳಿವೆ. ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಕರಣಗಳ ಸಂಖ್ಯೆಯೇನು ಕಡಿಮೆಯಾಗುತ್ತಿಲ್ಲ. ಅಂತಹುದೇ ಒಂದು ಪ್ರಕರಣ ಸಾಲಿಗ್ರಾಮ ಕಾರ್ಕಡದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬರು ಬರೋಬ್ಬರಿ 23 ಲಕ್ಷ ರೂ. ಕಳೆದುಕೊಂಡಿದ್ದಾರೆ.
ವಂಚನೆ ಹೀಗೆ ನಡೆಯಿತು: ಇಲ್ಲಿನ ಪಡುಹೋಳಿ ನಿವಾಸಿ ಎಂ.ಎನ್. ರಾಜು (44) ವಂಚನೆಗೆ ಒಳಗಾದವರು. ಅವರ ಮೊಬೈಲ್ನಲ್ಲಿ ಟೆಲಿಗ್ರಾಮ್ ಆ್ಯಪ್ಗೆ ಜು. 3ರಂದು ಶ್ರುತಿ ರಾಘವೇಂದ್ರ ಎನ್ನುವ ಹೆಸರಿನಲ್ಲಿ ಮೇಕ್ ಮೈ ಟ್ರಿಫ್ ಎಂಬ ಸಂದೇಶ ರವಾನೆಯಾಗಿದ್ದು, ಅದರಲ್ಲಿ ಆಸಕ್ತಿ ಇದ್ದಲ್ಲಿ ಭಾಗವಹಿಸುವಂತೆ ತಿಳಿಸಲಾಗಿತ್ತು. ರಾಜು ಅವರು ಕೂಡ ಆನ್ಲೈನ್ ವ್ಯವಹಾರದಲ್ಲಿ ಆಸಕ್ತಿ ಹೊಂದಿದ್ದು, ವ್ಯವಹಾರ ಮಾಡುವ ಉದ್ದೇಶದಿಂದ ಅದರಲ್ಲಿ ಮುಂದುವರಿದಿದ್ದಾರೆ. ಆಗ ಗ್ರಾಹಕರು ಬುಕ್ಕಿಂಗ್ ಮಾಡಿದ ಮೊತ್ತವನ್ನು ಮೊದಲಿಗೆ ಎಜೆನ್ಸಿಯವರೇ ಪಾವತಿಸಬೇಕು. ಅನಂತರ ಎಜೆನ್ಸಿಗೆ ಬುಕ್ಕಿಂಗ್ ಆಧರಿಸಿ ಕಮಿಷನ್ ಸಿಗಲಿದೆ ಎಂದು ವಂಚಕರು ಹೇಳಿದ್ದರು.
ಅದರಂತೆ ರಾಜು ಅವರು ಹಂತ ಹಂತವಾಗಿ ಲಕ್ಷಾಂತರ ರೂ ಪಾವತಿಸಿದ್ದಾರೆ. ಕೊನೆಗೆ 16,05,231 ರೂ. ಮೊತ್ತವನ್ನು ಮತ್ತೆ ಪಾವತಿ ಮಾಡಬೇಕು ಇಲ್ಲವಾದಲ್ಲಿ ಈವರೆಗೆ ಸಂದಾಯ ಮಾಡಿದ ಎಲ್ಲ ಹಣವೂ ಲ್ಯಾಪ್ಸ್ ಆಗುತ್ತದೆ ಎನ್ನುವುದಾಗಿ ವಂಚಕರು ತಿಳಿಸಿದ್ದರು. ಇನ್ನು ಹೆಚ್ಚಿಗೆ ಹಣ ಪಾವತಿ ಮಾಡಲು ಸಾಧ್ಯವಿಲ್ಲವೆಂದು ಹೇಳಿದಕ್ಕೆ ಆ್ಯಪ್ ಲ್ಯಾಪ್ಸ್ ಆಗುವುದಾಗಿ ಹೇಳಿದ್ದರು. ಇದರಿಂದ ಅನುಮಾನಗೊಂಡ ರಾಜು ಅವರು ವ್ಯವಹಾರ ಸ್ಥಗಿತಗೊಳಿಸಿದ್ದರು. ಆದರೆ ಅಷ್ಟರಲ್ಲೇ ಒಟ್ಟು 23,71,456 ರೂ. ಅನ್ನು ರಾಜು ಅವರು ವಂಚಕರಿಗೆ ಪಾವತಿಸಿ ಮೋಸ ಹೋಗಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.