ನವದೆಹಲಿ: ನಗರದ ಸುಲ್ತಾನ್‌ಪುರಿ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ನಕಲಿ ಕಾಲ್‌ಸೆಂಟರ್ ಕೇಂದ್ರಕ್ಕೆ ಪೊಲೀಸರು ಬೀಗ ಜಡಿದಿದ್ದು, ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಂಚಕರು ಫೇಸ್‌ಬುಕ್ ಮತ್ತು ಅಮೆಜಾನ್ ಕಾರ್ಯನಿರ್ವಾಹಕರಂತೆ ಸೋಗು ಹಾಕುತ್ತಿದ್ದರು. ಸಮಸ್ಯೆಯನ್ನು ಪರಿಹರಿಸುವ ನೆಪದಲ್ಲಿ ಅಮೆರಿಕದ ನಾಗರಿಕರನ್ನು ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಮಸ್ಯೆ ಪರಿಹಾರದ ನೆಪದಲ್ಲಿ ಭಾರಿ ಮೊತ್ತವನ್ನು ವಿಧಿಸುತ್ತಿದ್ದರು. ಸುಲ್ತಾನ್‌ಪುರಿಯಲ್ಲಿ ನಕಲಿ ಕಾಲ್ ಸೆಂಟರ್ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಈ ವೇಳೆ ತಂಡ ದಾಳಿ ನಡೆಸಿದಾಗ ಸ್ಥಳದಲ್ಲಿ ಹಲವಾರು ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಪತ್ತೆಯಾಗಿವೆ. ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಿದಾಗ, ವಂಚಕರು ತಮ್ಮ ಐಪಿ ವಿಳಾಸವನ್ನು ಮರೆಮಾಚಲು ಲ್ಯಾಪ್‌ಟಾಪ್‌ಗಳಲ್ಲಿ ವಿಪಿಎನ್ ಸಾಫ್ಟ್‌ವೇರ್ ಅನ್ನು ಸ್ಥಾಪಿಸಿದ್ದು , ಕಂಡುಬಂದಿದೆ.
ಲ್ಯಾಪ್‌ಟಾಪ್‌ಗಳನ್ನು ಮತ್ತಷ್ಟು ಪರಿಶೀಲಿಸಿದಾಗ, ಆರೋಪಿಗಳು ರಿಮೋಟ್ ಆಕ್ಸೆಸ್ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವುದು ಗೊತ್ತಾಗಿದೆ. ಕೆಲವು ಲ್ಯಾಪ್‌ಟಾಪ್‌ಗಳ ಡೌನ್‌ಲೋಡ್ ಫೋಲ್ಡರ್‌ನಲ್ಲಿ ಕರೆ ಸಂಭಾಷಣೆಗಳನ್ನು ರೆಕಾರ್ಡ್ ಮಾಡಲಾಗಿದೆ. ಲ್ಯಾಪ್‌ಟಾಪ್ ಒಂದರಲ್ಲಿ, ‘ಜೈ ಶ್ರೀ ಗಣೇಶ್ 100’ ಹೆಸರಿನ ವೆಬ್ ಅಪ್ಲಿಕೇಶನ್, ಟೆಲಿಗ್ರಾಮ್ ಗ್ರೂಪ್ ರಚಿಸಿರುವುದು ಕೂಡ ತಿಳಿದುಬಂದಿದೆ.