ಬಂಟ್ವಾಳ: ಆರ್ ಎಸ್.ಎಸ್.ಪ್ರಮುಖ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರದು ಆಕ್ಷೇಪ ಅರ್ಹ ಬರಹಗಳನ್ನು ಬರೆದು ಸಮಾಜದಲ್ಲಿ ಅಶಾಂತಿ ಹಬ್ಬಲು ಕೆಲವು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದು, ಇವರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಸೈಬರ್ ಕ್ರೈಮ್ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಆರ್.ಎಸ್.ಎಸ್.ಪ್ರಮುಖರಾಗಿರುವ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಸಂಸ್ಥಾಪಕ, ಪುತ್ತೂರು ವಿವೇಕಾನಂದ ವಿದ್ಯಾ ವರ್ದಕ ಸಂಘದ ಅಧ್ಯಕ್ಷರಾಗಿರುವ ಹಿಂದೂ ಸಾಮ್ರಾಟ್ ಎಂದೇ ಕರೆಯಲ್ಪಡುವ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ತೆರದು ಆಕ್ಷೇಪ ಆರ್ಹ ಸುದ್ದಿಗಳನ್ನು ಬಿತ್ತರಿಸುತ್ತಿರುವ ಬಗ್ಗೆ ದೂರು ದಾಖಲಾಗಿದೆ. ಕಲ್ಲಡ್ಕ ಡಾ ಭಟ್ ಅವರ ಫೇಸ್ ಬುಕ್ ಖಾತೆಯಾಗಲಿ, ಅಥವಾ ಇನ್ನಿತರ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿರುವುದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ ಈ ಖಾತೆಯ ಮೂಲಕ ಸಮಾಜದಲ್ಲಿ ಅಶಾಂತಿ ಹಬ್ಬಿಸುವ ಪ್ರಯತ್ನ ಮತ್ತು ಹೆಸರನ್ನು ಕೆಡಿಸುವ ಕೆಲಸ ಮಾಡಲಾಗುತ್ತಿದ್ದು ಈ ಬಗ್ಗೆ ಪೋಲೀಸರು ಸೂಕ್ತವಾದ ತನಿಖೆ ನಡೆಸುವಂತೆ ಮತ್ತು ಅವರ ಮೇಲೆ ಕಾನೂನು ಕ್ರಮವನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಕಂಡುಬರದಂತೆ ಪೋಲೀಸರು ನಿಗಾವಹಿಸುವಂತೆಯೂ ಅವರು ತಿಳಿಸಿದ್ದಾರೆ.