ಮಂಗಳೂರು: ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಏಕೈಕ ಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ ಸೆಪ್ಟೆಂಬರ್ ೧೫ ನೇ ಶುಕ್ರವಾರ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ, ಕಾಲೇಜಿನ ಭೋದಕ-ಭೋದಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸರ್ಕಾರದ ಆದೇಶದಂತೆ ಭಾರತ ಸಂವಿಧಾನದ ಪೀಠಿಕೆಯನ್ನು ಓದುವ ಮತ್ತು ಪ್ರತಿಜ್ಞೆ ಮಾಡುವ ಮೂಲಕ ಅರಿವು ಮೂಡಿಸಲಾಯಿತು.
ಈ ವಿಶೇಷ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಭಾರ ಡೀನ್ ಆದ ಪ್ರೊಫೆಸರ್ ಡಾ. ಎ.ಟಿ. ರಾಮಚಂದ್ರ ನಾಯ್ಕ ಮಾತನಾಡಿ ಇಂದಿನ ಯುವಕರು ನಮ್ಮ ದೇಶದ ಏಳಿಗೆಗಾಗಿ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕು ಎಂದು ಹೇಳಿದರು. ದಶಕಗಳಿಂದ ಮುಂದುವರೆಯುತ್ತಲೇ ಇರುವ ಭಾರತ ದೇಶವನ್ನು ಪಾಶ್ಚಾತ್ಯ ದೇಶಗಳ ಹೋಲಿಕೆಯಲ್ಲಿ ಮುಂದುವರೆದ ದೇಶವನ್ನಾಗಿ ಮಾಡಲು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಅತ್ಯಗತ್ಯ. ಈ ನಿಟ್ಟಿನಲ್ಲಿ ಇಂದಿನ ಯುವಕರ ಶ್ರಮ ಮತ್ತು ಕೊಡುಗೆ ಮುಖ್ಯವಾದುದು ಎಂದು ಹೇಳಿದರು.
ಭಾರತೀಯರು ಮುಂಬರುವ ಸವಾಲುಗಳನ್ನು ಎದುರಿಸಿ ದೇಶದ ಏಳಿಗೆಗೆ ಮತ್ತು ಬೆಳವಣಿಗೆಗೆ ಮಾನ್ಯತೆ ಕೊಟ್ಟು ಜಾಗತಿಕ ರಂಗದಲ್ಲಿ ಪೈಪೋಟಿ ನಡೆಸುತ್ತಿರುವ ಇತರೆ ರಾಷ್ಟ್ರ ಗಳ ಎದುರು ಹೋರಾಡುವ ಚೈತನ್ಯವನ್ನು ಪ್ರತಿಯೊಬ್ಬರು ಗಳಿಸಿಕೊಳ್ಳಬೇಕು ಎಂದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಘೋಷಣೆಯಾದ ‘ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲರಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ನೀಡುವ ಹಾಗೂ ನಮಗೆಲ್ಲರಿಗೂ ಸರಕಾರವನ್ನು ಆಯ್ಕೆ ಮಾಡುವ ಹಕ್ಕನ್ನು ನೀಡಬೇಕು ಮತ್ತು ಸರ್ಕಾರವನ್ನು ರಚಿಸಬೇಕು’ ಎಂಬ ದ್ಯೇಯದ ಮಹತ್ವವನ್ನು ಡಾ. ಎ.ಟಿ. ರಾಮಚಂದ್ರ ನಾಯ್ಕ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ. ಮೃದುಲಾ ರಾಜೇಶ್ ಪೀಠಿಕೆಯನ್ನು ಓದಿಸಿದರು. ವಿದ್ಯಾರ್ಥಿ ಸಲಹೆಗಾರ ಡಾ. ಕುಮಾರನಾಯ್ಕ ಎ.ಎಸ್. ಸ್ವಾಗತಿಸಿದರು. ತೃತೀಯ ಪದವಿ ವಿಧ್ಯಾರ್ಥಿಗಳಾದ ಧ್ಯಾನ್‌ಚಂದ್ ಮತ್ತು ರಷ್ಮಿ ಕ್ರಮವಾಗಿ ವಂದನಾರ್ಪಣೆ ಮತ್ತು ನಿರೂಪಣೆ ಮಾಡಿದರು.