ಬೆಂಗಳೂರು: ನಗರದ ಯಶವಂತಪುರದಲ್ಲಿ ಬಿಎಂಟಿಸಿ ಬಸ್ಗೆ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೊಬ್ಬ ಬಲಿಯಾಗಿರುವ ಘಟನೆ ನಡೆದಿದೆ.
ಸಾವನ್ನಪ್ಪಿದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಗಂಗಾಧರ್ (21) ಎಂದು ಗುರುತಿಸಲಾಗಿದ್ದು, ಇಂಟರ್ನ್ ಶಿಫ್ ಸರ್ಟಿಫಿಕೇಟ್ ತರಲು ಹೆಚ್ಎಎಲ್ ಕಡೆ ತೆರಳುತ್ತಿದ್ದ ವೇಳೆ ಹಿಂಭಾಗದಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ವಿದ್ಯಾರ್ಥಿ ಸಾವನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಮೃತರ ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ನಂತರ ಬಸ್ನ ಚಕ್ರ ಗಂಗಾಧರ್ ಮೇಲೆ ಹರಿದಿದೆ. ಪರಿಣಾಮ ಸ್ಥಳದಲ್ಲೇ ಗಂಗಾಧರ್ ಅವರು ಕೊನೆಯುಸಿರೆಳೆದಿದ್ದಾರೆ. ಸದ್ಯ ಮೃತ ವಿದ್ಯಾರ್ಥಿಯ ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅಪಘಾತದ ಸ್ಥಳಕ್ಕೆ ಯಶವಂತಪುರ ಸಂಚಾರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಎಸಗಿದ್ದ ಬಸ್ ಚಾಲಕನಿಗೆ ಠಾಣೆಗೆ ಬರುವಂತೆ ಸೂಚನೆ ನೀಡಲಾಗಿದ್ದು, ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.