ಬೆಳಗಾವಿ: ಕಳ್ಳರು ತಮ್ಮ ಕೃತ್ಯಗಳನ್ನು ನಡೆಸಲು ತರೇಹವಾರಿ ಐಡಿಯಾಗಳನ್ನು ಬಳಸುತ್ತಾರೆ. ಅಂತಹುದೇ ಒಂದು ಕಳ್ಳರ ತಂತ್ರ ತಂಡವನ್ನು ಪೊಲೀಸರು ಬೇಧಿಸಿದ್ದಾರೆ. ಬೆಳಗಾವಿ ಅಬಕಾರಿ ಇಲಾಖೆಯು ಪುಷ್ಪ ಚಿತ್ರದ ಮಾದರಿಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಜಾಲವನ್ನು ಪತ್ತೆ ಹಚ್ಚಿದೆ. ಗೋವಾದಿಂದ ತೆಲಂಗಾಣಕ್ಕೆ ಹೊರಟಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ತೆಲಂಗಾಣದಲ್ಲಿ ಚುನಾವಣೆ ಜೋರಾಗಿದ್ದು, ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ಈ ದಾಳಿ ನಡೆಸಿದರು.
ವಿದ್ಯುತ್ ಟ್ರಾನ್ಸ್ಫಾರ್ಮರ್ ಮಾದರಿಯ ಡಬ್ಬಾಗಳಲ್ಲಿ ಮದ್ಯ ಸಾಗಾಟ ನಡೆದಿತ್ತು. ವಿದ್ಯುತ್ ಟ್ರಾನ್ಸ್ಫಾರ್ಮರ್ನ ಎರಡು ದೊಡ್ಡ ಡಬ್ಬಾಗಳಲ್ಲಿ ಇದ್ದ 10 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ. ಮುಂಬೈ ನಿವಾಸಿ ಲಾರಿ ಡ್ರೈವರ್ ಶ್ರೀರಾಮ್ ಪರಡೇ ಎಂಬಾತನನ್ನು ಬಂಧಿಸಲಾಗಿದೆ. ವಿದ್ಯುತ್ ಟ್ರಾನ್ಸ್ಫಾರ್ಮರ್ ಯಾರೂ ಪರಿಶೀಲಿಸಲ್ಲ ಎಂಬ ಪ್ಲ್ಯಾನ್ ಇದಾಗಿತ್ತು. ಹೈಟೆಕ್ ಟೆಕ್ನಾಲಜಿ ಬಳಸಿ ಜಿಪಿಎಸ್, ಆ್ಯಪ್ ಮೂಲಕ ಆರೋಪಿಗಳು ತೆಲಂಗಾಣದಲ್ಲಿ ಕುಳಿತು ಲಾರಿಯನ್ನು ನಿಯಂತ್ರಣ ಮಾಡುತ್ತಿದ್ದರು. ಲಾರಿಯನ್ನು ವಶಕ್ಕೆ ಪಡೆಯುತ್ತಿದ್ದಂತೆ ಆರೋಪಿಗಳು ಜಿಪಿಎಸ್ ಬಂದ್ ಮಾಡಿದ್ದಾರೆ! ಇಲಾಖೆಯ ಅಪರ ಆಯುಕ್ತ ಡಾ.ಮಂಜುನಾಥ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಬೆಳಗಾವಿ ಅಬಕಾರಿ ಇಲಾಖೆಯ ಕಚೇರಿಯಲ್ಲಿ ಟ್ರಾನ್ಸ್ಫಾರ್ಮರ್ ಓಪನ್ ಮಾಡಲಾಗಿ ಅಕ್ರಮದ ದಿವ್ಯದರ್ಶನವಾಗಿದೆ