ನವದೆಹಲಿ (ಮಾ.16): 18ನೇ ಲೋಕಸಭೆಗೆ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ ಘೋಷಣೆ ಮಾಡಿದೆ. ಏಪ್ರಿಲ್ 19 ರಿಂದ ಜೂನ್ 1ರವರೆಗೆ ಚುನಾವಣೆ ನಡೆಯಲಿದ್ದು, ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ತಿಳಿಸಿದೆ. ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹಾಗೂ ಇತ್ತೀಚೆಗೆ ಚುನಾವಣಾ ಆಯೋಗ ಸೇರಿರುವ ಆಯುಕ್ತದ ಜ್ಞಾನೇಶ್ ಕುಮಾರ್ ಹಾಗೂ ಸುಖ್ಬೀರ್ ಸಿಂಗ್ ಸಂಧು ಶನಿವಾರ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದರು. ಲೋಕಸಭೆ ಚುನಾವಣೆ ಘೋಷಣೆ ಆದ ಬೆನ್ನಲ್ಲಿಯೇ ನೀತಿ ಸಂಹಿತೆ ಕೂಡ ಜಾರಿಯಾಗಿದೆ. ಇನ್ನು ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಒಡಿಶಾ ರಾಜ್ಯಗಳ ವಿಧಾನಸಭೆ ಅವಧಿ ಕೂಡ ಜೂನ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಆ ರಾಜ್ಯಗಳ ವಿಧಾನಸಭೆಗೂ ಲೋಕಸಭೆಯ ಜೊತೆಗೇ ಚುನಾವಣೆ ಘೋಷಣೆಯಾಗಿದೆ.
ಕರ್ನಾಟಕದಲ್ಲಿ ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 26ಕ್ಕೆ ಮೊದಲ ಹಂತದಲ್ಲಿ 14 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದರೆ, ಮೇ 7ಕ್ಕೆ 2ನೇ ಹಂತದಲ್ಲಿ ಉಳಿದ 14 ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
