ಪಾಂಡವರು ಮಾಡುತ್ತಿದ್ದ ರಾಜಸೂಯಾ ಯಾಗಕ್ಕೆ ಆಹ್ವಾನವಿದ್ದ ದುರ್ಯೋಧನ ದಾಯಾದಿ ಮತ್ಸರವಿದ್ದರೂ ಬರುತ್ತಾನೆ. ಆ ಸಂದರ್ಭದಲ್ಲಿ ಮಾಯಾರಾಕ್ಷಸ ನಿರ್ಮಿತ ಮಾಯಾಭವನದಲ್ಲಿ ನಡೆಯಲು ಗೊಂದಲವುಂಟಾಗಿ ನೆಲವನ್ನು ಕೊಳವೆಂದೂ ಕೊಳವನ್ನು ನೆಲವೆಂದೂ ಭ್ರಮಿಸಿ ಜಾರಿ ಬೀಳುವ ಸಂದರ್ಭ ಇದನ್ನು ನೋಡುತ್ತಿದ್ದ ಪಾಂಚಾಲಿಯ ಕಿವಿಯಲ್ಲಿ ಕುರುಡನ ಮಗನೂ ಕುರುಡನಾದನೇ! ಎಂದು ಸುರಿದಾಗ ತಡೆದುಕೊಳ್ಳಲಾರದೆ ದ್ರೌಪದಿ ನಗುತ್ತಾಳೆ. ಈ ಒಂದು ಘಟನೆ ತುಂಬಿದ ಸಭೆಯ ಅವಮಾನಕ್ಕೆ ಕಾರಣವಾಗುತ್ತದೆ ಪಾಂಚಾಲಿಗೆ. ಇಲ್ಲಿ ನುಡಿದ ನಾಲಿಗೆಯೊಂದು, ಕೇಳಿಸಿಕೊಂಡ ಕಿವಿಯೊಂದು. ಆದರೆ ಪರಿಣಾಮ! ಕುರುಕ್ಷೇತ್ರ ಯುದ್ಧಕ್ಕೇ ನಾಂದಿಯಾಯಿತು. ಇದು ಮಹಾಭಾರತದ ಸಂಗತಿಯಾದರೆ ಇನ್ನು ತ್ರೇತಾಯುಗದ ರಾಮ ಕಾಡಿನಲ್ಲಿ ಪರಿತಪಿಸಲು ಕಾರಣವಾದದ್ದೂ ಇಂತಹದ್ದೇ ನಾಲಿಗೆ. ಎಲ್ಲವೂ ಕೌಸಲ್ಯೆ ಮಗನಿಗಾದರೆ ನಿನ್ನ ಮಗನಿಗೆಲ್ಲಿದೆ ಗದ್ದುಗೆ? ಮಂಥರೆಯ ನಾಲಿಗೆ ಹೀಗೆ ಚಾಚಿದ್ದೇ ಕೇಳಿಸಿಕೊಂಡ ಕೈಕೇಯಿ ಕಿವಿ ರಾಮಾಯಣದಲ್ಲಿ ಬರುವ ಸಂಘರ್ಷಗಳಿಗೆ ಮೂಲವಾಯಿತು.
ಎಲ್ಲ ಕಾಲದಲ್ಲೂ ಈ ನಾಲಿಗೆ ಮಹಾತ್ಮನ ಪಾತ್ರ ಬಹಳ ಮುಖ್ಯವಾದದ್ದು ಎಂಬುದಕ್ಕೆ ಬೇಕಾದಷ್ಟು ಪುರಾವೆಗಳು ನಮಗೆ ಸಿಕ್ಕಿದರೂ ದಿನನಿತ್ಯ ಮನುಷ್ಯ ಚಾಚುವ ನಾಲಿಗೆಯ ಪಾತ್ರ ಸಣ್ಣದೇನಿಲ್ಲ. ನಾಲಿಗೆಯಿರುವುದು ಕೇವಲ ರುಚಿ ಗ್ರಹಿಸುವುದಕ್ಕೆ ಎನ್ನುವಂತಿಲ್ಲ ಯಾಕೆಂದರೆ ಬುದ್ಧಿಜೀವಿಯೆನಿಸಿಕೊಂಡ ಮನುಷ್ಯನಲ್ಲಿ ಈ ನಾಲಿಗೆರಾಯ ತೆಗೆದುಕೊಳ್ಳುವ ಜವಾಬ್ದಾರಿ ಬಹುವಿಧ. ಆತ ಸಂಬಂಧಗಳನ್ನು ಒಡೆಯಲೂ ಬಹುದು ಅಥವಾ ಸೇರಿಸಲೂ ಬಹುದು. ನಾಲಿಗೆಯಲ್ಲಿ ಹೊರನಾಲಿಗೆ ಮತ್ತು ಕಿರುನಾಲಿಗೆಯೆಂಬ ಎರಡು ಬಗೆಯಿದ್ದು ಹೊರನಾಲಿಗೆ ರುಚಿಯನ್ನು ಆಸ್ವಾದಿಸುವುದಕ್ಕೆ ಮಾತ್ರವಲ್ಲದೆ ಬಹಳಷ್ಟು ಸಲ ಸುಖಾಸುಮ್ಮನೆ ಹೊರಗಿನ ಪ್ರಪಂಚದಲ್ಲಿ ತೇಲಾಡುತ್ತಾನೆ. ಮಾತಿಗೆ ಬಹುಮುಖ್ಯವಾಗಿ ಬೇಕಾಗುವ ಕಿರುನಾಲಿಗೆಯೇನೂ ಪಡಪ್ಪೋಶಿಯಲ್ಲ, ಮಾತು ಏರುಪೇರಾದರೆ ಕೇಳುವವರು ಹೇಳುವ ಮೊದಲ ಮಾತು ಆತನ ನಾಲಿಗೆ ಸರಿಯಿಲ್ಲ ಎಂದು. ಇಲ್ಲಿ ನಾಲಿಗೆ ಸರಿಯಿಲ್ಲವೆಂದರೆ ರುಚಿ ಗ್ರಹಿಸುವುದಿಲ್ಲ ಎಂಬರ್ಥವಲ್ಲ, ಬದಲಾಗಿ ಮಾತು ಸರಿಯಿಲ್ಲವೆಂದರ್ಥ. ಹೊರನಾಲಿಗೆ ತರುವ ಸುದ್ದಿಯನ್ನು ಇನ್ನೊಂದು ಕಿವಿಗೆ ರಸವತ್ತಾಗಿ ತಿಳಿಸಲು ಸಹಕಾರಿಯಾಗುವಾತ ಹಾಗೂ ಎರಡು ಕಿವಿಗಳು ನಿರ್ವಹಿಸುವ ಕಾರ್ಯವಿದೆಯಲ್ಲ ಅದೊಂದು ರೀತಿಯ ಹೊಂದಾಣಿಕೆಯ ಸಂಬಂಧದ ಕೆಲಸ. ಇಲ್ಲಿ ಕೆಲವೊಮ್ಮೆ ನಾಲಿಗೆ ನುಡಿದದ್ದನ್ನು ಹಿಂದೆಮುಂದೆ ಯೋಚಿಸದೆ ಕೇಳುವ ಕಿವಿಗಳು ನಂಬುವುದೇ ಜಾಸ್ತಿ. ಹೀಗಾಡುವ ನಾಲಿಗೆಗೆ ಸತ್ಯವನ್ನೇ ನುಡಿಯಬೇಕೆಂಬ ನಿಯಮ ಬುದ್ಧಿ ಹಾಕಿದರೂ ಬೇಲಿ ಹಾರುವ ಮಂಗನಂತೆ ನಾಲಿಗೆ. ಒಮ್ಮೆಒಂದು ಸುಳ್ಳಿನ ಲೋಕವನ್ನು ನೋಡಹೋಗಿ ಅಲ್ಲಿಯೇ ಮಂಟಪ ಕಟ್ಟಿ ಸುಖಿಸುವ ಮನೋಭಾವ ಸುಳ್ಳು ನಾಲಿಗೆಯದ್ದಾದರೆ ಸತ್ಯವೆಂಬ ಅನುಭವ ಮಂಟಪದಲ್ಲಿ ಕುಳಿತ ನಾಲಿಗೆಯ ಸ್ಥಿತಿ ತ್ರಿಶಂಕುವಿನಂತೆ. ಸುಳ್ಳಪ್ಪ ಕುಣಿಯುವುದನ್ನು ನೋಡಿ ಎಗರಿ ಬಿಡಲೇ ಅಂತೆನ್ನಿಸಿದರೂ ಬುದ್ಧಿಯ ಮಾತು ಕೇಳಿ ಮತ್ತೆ ತನ್ನಷ್ಟಕ್ಕೇ ತಾನು ನಿದ್ರಿಸಲಾರಂಭಿಸುತ್ತದೆ. ಆತನಿಗೆ ತಿಳಿದಿದೆ, ಸುಳ್ಳಾಡುವವನು ಒಂದು ಸಲಕ್ಕೆ ಒಳ್ಳೆಯವನಾದರೂ ತನ್ನ ಸಮಕ್ಕೆ ನಿಲ್ಲಲಾರದವನೆಂದು.
ಈ ಸತ್ಯನಾಲಿಗೆ ಮತ್ತು ಮಿಥ್ಯನಾಲಿಗೆಯೊಡನಿರುವ ಇನ್ನೊಬ್ಬನೇ ಚಾಡಿನಾಲಿಗೆ. ಇದ್ಯಾವುದಿದು ಚಾಡಿನಾಲಿಗೆಯೆಂದು ಹುಬ್ಬೇರಿಸುವ ಮೊದಲು ಮಂಥರೆಯನ್ನೋ! ಶೂರ್ಪನಖಿಯನ್ನೋ! ಅಥವಾ ಶಕುನಿಯನ್ನೋ! ಒಮ್ಮೆ ನೆನಪಿಸಿಕೊಂಡರೆ ಚಾಡಿನಾಲಿಗೆಯ ಗುಣಲಕ್ಷಣಗಳು ಸ್ಪಷ್ಟವಾಗಿ ತಿಳಿಯಲು ಸಾಧ್ಯ. ಇವರೆಲ್ಲರನ್ನೂ ಆಡಿಸಿದ್ದು ಅದೇ ಚಾಡಿನಾಲಿಗೆ. ಸತ್ಯಮಿಥ್ಯಾದಿ ನಾಲಿಗೆಗಳಿಗಿಂತಲೂ ಇವನು ನೋಡಲು ಬಹಳ ಸುಂದರನಷ್ಟೇ ಅಲ್ಲದೆ ಮಾಡುವ ಕೆಲಸವೂ ಬೆಣ್ಣೆಯಿಂದ ನೂಲು ತೆಗೆಯುವಂತಹ ನಾಜೂಕಿನದ್ದು. ಕೇಳುವ ಕಿವಿಯನ್ನು ಹೊಗಳಿಕೆಯ ಅಟ್ಟಕ್ಕೇರಿಸಿ ತನ್ನ ಕಾರ್ಯವನ್ನು ಉಪಾಯದಿಂದ ಮಾಡಿ ಮುಗಿಸುವ ಇವನ ಮುಖ್ಯ ಉದ್ದೇಶವೇ ಸಂಬಂಧವೆಂಬ ಹಾಲಿನ ಪಾತ್ರೆಗೆ ಹುಳಿ ಹಿಂಡುವಂತಹದ್ದು. ಈ ಹುಳಿಯನ್ನು ತೆಗೆದುಕೊಳ್ಳುವ ಕಿವಿ ಮೊಸರು ಅಥವಾ ಮಜ್ಜಿಗೆ ಮಾಡುವುದು ಅವನಿಗೆ ಬೇಕಿಲ್ಲವಾದುದರಿಂದ ನೇರವಾಗಿ ಭಾವನೆಯೆಂಬ ಹಾಲೊಡೆಯುವ ಕೆಲಸವನ್ನು ಮುಗಿಸಿ ಕೈ ತೊಳೆದುಕೊಳ್ಳುತ್ತಾನೆ. ಆದುದರಿಂದ ಈ ಚಾಡಿನಾಲಿಗೆಯನ್ನು ಹತ್ತಿರ ಸೇರಿಸಿಕೊಳ್ಳುವ ಮೊದಲು ನಾವು ತುಸು ಎಚ್ಚರವಾಗಿರಬೇಕಾದ್ದು ಅಗತ್ಯವೂ ಹೌದು.
ಚಾಡಿನಾಲಿಗೆಗಿಂತ ಸ್ವಲ್ಪ ಭಿನ್ನವಾದುದು ನಾರದನಾಲಿಗೆ. ಈ ನಾಲಿಗೆಗೆ ಸಂಬಂಧಗಳನ್ನು ಹಾಳು ಮಾಡುವ ಉದ್ದೇಶವಿರದಿದ್ದರೂ ನೋಡಿದ್ದನ್ನು ಹೇಳದೆಯೇ ಸುಮ್ಮನಿರಲಾಗದ ಬುದ್ಧಿಯದರದ್ದು. ಮೂಲ ಆಶಯ ಸರ್ವರಿಗೂ ಒಳಿತು ಆಗಿದ್ದರೂ ಎಲ್ಲರೆದುರು ಒಳ್ಳೆಯವನೆನ್ನಿಸಿಕೊಳ್ಳುವ ಚಟ ಇವನನ್ನೇ ಕೆಟ್ಟವನನ್ನಾಗಿಸುತ್ತದೆ. ಯಾವುದನ್ನು ಎಲ್ಲಿ ಹೇಳಬೇಕೆಂಬ ಪರಿವೆಯಿಲ್ಲದೆ ಸಿಕ್ಕಿದೆಡೆ ಹೇಳಿ ಕೊನೆಗೊಮ್ಮೆ ಹಾಸ್ಯಾಸ್ಪದವಾಗುವ ನಾಲಿಗೆಯಿದು ನಾರದನಾಲಿಗೆ. ಈತ ಮಾಡುವ ಬಹುಪಾಲು ಕೆಲಸ ಉತ್ತಮವಾಗಿದ್ದರೂ ಎಂದೋ ಒಮ್ಮೆ ಮಾಡುವ ಒಂದು ಎಡವಟ್ಟು ಎಲ್ಲವನ್ನೂ ತೊಳೆಯುತ್ತದೆ. ನಾರದನಾಲಿಗೆ ಕೆಟ್ಟವನಲ್ಲದಿದ್ದರೂ ಆತನ ಕೇಳ್ಮೆಯಿದ್ದಲ್ಲಿ ಎಚ್ಚರಿಕೆ ಅಗತ್ಯ. ಇಲ್ಲಿಗೇ ನಾಲಿಗೆ ವಿಧ ಮುಗಿಯಿತೆಂದುಕೊಳ್ಳಬೇಡಿ. ಶಕುನ ನುಡಿಯುವ ದೃಷ್ಟಿ ನಾಲಿಗೆಯಿದೆ, ನುಡಿದದ್ದು ಸತ್ಯವಾಗುವ ಮಚ್ಚೆನಾಲಿಗೆಯೂ ಇದೆ. ಆದರೆ ಇವೆರಡೂ ನಂಬಿಕೆಗಳನ್ನು ಹೊಂದಿಕೊಂಡಿರುವುದರಿಂದ ಗುಣದೊಂದಿಗೆ ಇವರು ಗುರುತಿಸಲ್ಪಡುವುದಿಲ್ಲವಾದರೂ ಕಿವಿ ಇವರೆದುರು ಸಿಕ್ಕಿಹಾಕಿಕೊಳ್ಳಲು ತುಸು ಭಯಪಟ್ಟುಕೊಳ್ಳುವುದಂತೂ ಸತ್ಯ.
ಖಾಸಗಿ ಬದುಕಿಗೆ ಇಣುಕುವ ಮುನ್ನ:
ನಿತ್ಯ ಬದುಕಿನಲ್ಲಿ ಒಳ್ಳೆಯವರಾಗಲು ಯತ್ನಿಸುವವರ ಬಹುತೇಕರ ಕತೆಯಿದು. ಒಂದೋ ಖಾಸಗಿ ವಿಷಯಗಳನ್ನು ಹಂಚಿಕೊಂಡು ಸೋತಿರುತ್ತಾರೆ ಇಲ್ಲವೇ ಇತರರ ವಿಚಾರಗಳಿಗೆ ಮೂಗು ತೂರಿಸಿ ಪರಿಣಾಮವನ್ನು ಅನುಭವಿಸಿದವರಿರುತ್ತಾರೆ. ಕೆಲವೊಮ್ಮೆ ತಿಳಿಯದೆಯೇ ಇಂತಹ ಮಾತುಗಳನ್ನಾಡ ಹೊರಟರೆ ಇನ್ನೂ ಕೆಲವೊಮ್ಮೆ ಎದುರಿದ್ದಾತನ ತೇಜೋವಧೆಗಾಗಿಯೇ ಆತನ ವೈಯಕ್ತಿಕ ಬದುಕನ್ನು ಎಳೆಯುವವರೂ ಇದ್ದಾರೆ. ಇದು ಜಿದ್ದೋ! ಅಸೂಯೆಯೋ! ಅಥವಾ ಇತರರಿಗೆ ತಿಳಿಯದ್ದು ತನಗೆ ಆತನ ಬಗ್ಗೆ ತಿಳಿದೆದಿದೆಯೆಂದು ತೋರಿಸಿಕೊಳ್ಳುವ ಹೆಚ್ಚುಗಾರಿಕೆಯೋ! ಏನೇ ಆದರೂ ತಪ್ಪುತಪ್ಪೇ ಯಾಕೆಂದರೆ ಇತರರ ವೈಯಕ್ತಿಕ ಬದುಕನ್ನು ಆಡಿಕೊಳ್ಳುವ ಅರ್ಹತೆ ಯಾರಿಗೂ ಇಲ್ಲವೆಂಬುದನ್ನು ನೆನಪಿಟ್ಟುಕೊಂಡು ಎಲ್ಲರಿಗೂ ಖಾಸಗಿ ಸಮಯಕ್ಕೆ ಬದುಕು ಅವಕಾಶ ಕೊಟ್ಟಿರುವಾಗ ಅದನ್ನು ಆಡಿಕೊಳ್ಳುವಾಧಿಕಾರ ಇನ್ನೊಬ್ಬನದ್ದಲ್ಲ. ಎಂದೋ ಒಂದು ಬಾರಿ ನಂಬಿ ಹಂಚಿಕೊಂಡ ವಿಷಯಇಬ್ಬರ ನಡುವಿರಬೇಕೇ ಹೊರತು ತಾನು ಒಳ್ಳೆಯವನಾಗುವ ಅಥವಾ ಸುದ್ದಿ ಮಾಡುವ ಹಪಹಪಿಕೆಯಲ್ಲಿ ಜಗಜ್ಜಾಹೀರು ಮಾಡುವ ಹಠ ತನ್ನ ಸಂಸ್ಕಾರವನ್ನು ಲೋಕಕ್ಕೆ ತೋರಿಸುತ್ತದೆಯೇ ವಿನಃ ಇನ್ನೊಬ್ಬನದ್ದಲ್ಲ. ಅಂಗೈ ಹುಣ್ಣಿಗೆ ಕನ್ನಡಿಯ ಅವಶ್ಯಕತೆ ಎಂದಾದರೂ ಇತ್ತೇ?
ಮನುಷ್ಯ ಸಂಘ ಜೀವಿ, ಆತನೆಂದೂ ಒಬ್ಬಂಟಿಯಾಗಿ ಬಾಳಲಾರನೆಂಬುದು ನಮಗೆ ನಿಮಗೆ ಗೊತ್ತಿರುವ ವಿಷಯ ಹೌದು. ತನ್ನ ಮನದ ಮಾತುಗಳನ್ನು ಇನ್ನೊಬ್ಬನಲ್ಲಿ ಹಂಚಿಕೊಳ್ಳಬೇಕೆನ್ನುವ ತುಡಿತ ಪ್ರತಿಯೊಬ್ಬರಲ್ಲಿಯೂ ಇದ್ದರೆ ಅದು ಮಾನವ ಸಹಜಗುಣ. ಹಂಚಿಕೊಳ್ಳುವುದರಿಂದ ಆ ವಿಷಯ ಅಥವಾ ನೋವಿಗೆ ಸಮಾಧಾನ ಸಿಕ್ಕೀತೆಂಬ ಖಾತರಿಯಲ್ಲದಿದ್ದರೂ ಹೇಳಿದವನ ಮನಸ್ಸಿಗೆ ತುಸು ನೆಮ್ಮದಿ ದೊರಕುವುದಂತೂ ನಿಜ. ಕೆಲವರು ಯಾವುದೇ ವಿಷಯವನ್ನು ಯಾರೊಡನೆಯೂ ಹಂಚಿಕೊಳ್ಳದೆಯೇ ಇರುತ್ತಾರಾದರೆ ಇನ್ನೂ ಕೆಲವರಿಗೆ ತಮ್ಮ ಬದುಕಿನ ಪ್ರತಿಯೊಂದು ವಿಷಯಗಳನ್ನು ಇನ್ನೊಬ್ಬರಲ್ಲಿ ಹೇಳಿಕೊಂಡರಷ್ಟೇ ಸಮಾಧಾನ ವೆನ್ನುವವರೂ ಇದ್ದಾರೆ. ಆದರೆ ಅತಿಯಾದರೆ ಎರಡೂ ಅಪಾಯವೇ. ಹಂಚಿಕೊಳ್ಳಲಾರದ ಸ್ವಭಾವ ಮನಸ್ಸಿಗೆ ಒತ್ತಡವನ್ನುಂಟು ಮಾಡಿದರೆ ಇನ್ನು ಸಿಕ್ಕಿದ್ದೆಲ್ಲ ಹಂಚಿಕೊಳ್ಳುವ ಬುದ್ಧಿ ಆಡಿಕೊಳ್ಳುವ ಬಾಯಿಗೆ ನಾವೇ ತುತ್ತನ್ನಿಟ್ಟು ನುಂಗಿಕೊಳ್ಳಲು ಹೇಳಿದಂತೆ.
ಮಾತು ಆಡುವ ಮುನ್ನ ಎಚ್ಚರವಿರಲಿ. ನಂಬಿಕೆಗೆ ಯೋಗ್ಯವೆಂದು ಪೂರ್ತಿ ಅರಿತುಕೊಂಡ ಮೇಲೆಯಷ್ಟೇ ಅಂತರಂಗವನ್ನು ತೆರೆದಿಡುವ ನಿರ್ಧಾರ ಮಾಡಿಕೊಳ್ಳಬೇಕಾಗಿತ್ತಿವಿಷ್ಟೂ ಮಾತನ್ನು ಹಂಚಿಕೊಳ್ಳುವ ವಿಚಾರವಾದರೆ ಇನ್ನು ಪ್ರಸ್ತುತ ಕಾಲಘಟ್ಟ ಜಾಲ ತಾಣಯುಗ. ಇಲ್ಲಿ ಹಂಚಿಕೊಳ್ಳುವ ವಿಷಯಗಳು ಮತ್ತು ಇದರಿಂದಾಗುವ ಅನಾಹುತಗಳು ಮಾತಿನ ಅಪಾಯದಷ್ಟು ಸಾಮಾನ್ಯವಲ್ಲ ಹಾಗೂ ಈ ಜಾಲತಾಣ ಹಂಚಿಕೆಯ ಎಡವಟ್ಟುಗಳು ಕೌಟುಂಬಿಕ, ಸಾಮಾಜಿಕ ದುರಂತಗಳಿಗೆ ಕಾರಣವೂ ಆಗಿ ನಿಂತಿದೆ.
ಅಬ್ಬಬ್ಬಾ! ಇಷ್ಟೆಲ್ಲ ನಾಲಿಗೆಯಿದೆಯೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಡಿ. ಹೀಗಿರುವುದಿದೆ ಎಂಬುದಕ್ಕೇ ಪುರಂದರದಾಸರು ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ಎಂಬ ಕೀರ್ತನೆಯನ್ನು ಕಟ್ಟಿರುವುದು. ತುತ್ತುಣುವ ನಾಲಿಗೆ ನಮ್ಮದಾದರೂ ಆಡುವ ಮಾತು ನಾಲ್ಕು ಮಂದಿಯ ಕಿವಿಯ ಹಸಿವನ್ನು ನೀಗಿಸುವಂತಹದ್ದಾದುದರಿಂದ ನಾಲಿಗೆ ಹರಿಯ ಬಿಡುವ ಮುನ್ನ ಹಿಡಿತದಲ್ಲಿಟ್ಟುಕೊಳ್ಳೋಣ. ಕೊನೆಗೊಂದು ವಿಷಯ, ನಮ್ಮ ನಾಲಿಗೆಗಳು ಇವಿಷ್ಟರಲ್ಲಿ ಯಾವ ಗುಂಪಿಗೆ ಸೇರುತ್ತದೆಯೆಂದು ತುಸು ಯೋಚಿಸುವುನ್ನು ಕಲಿಯಬೇಕಾಗಿದೆ.
-ಅಕ್ಷತಾರಾಜ್ ಪೆರ್ಲ