ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನ ಜನತಾದಳ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಪ್ರಜ್ವಲ್ ರೇವಣ್ಣ ಅವರನ್ನು ಉಚ್ಚಾಟನೆ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಆದೇಶ ಮಾಡಿದ್ದಾರೆ.
ಕರ್ನಾಟಕದಲ್ಲಿ ಪ್ರಜ್ವಲ್ ರೇವಣ್ಣ ವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಪಕ್ಷ ಈ ಕ್ರಮ ಕೈಗೊಂಡಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ವಿವಾದ ಕರ್ನಾಟಕದಲ್ಲಿ ಬಿಜೆಪಿ ಹಾಗೂ ದಳ ಮೈತ್ರಿಗೆ ಹಿನ್ನಡೆಯಾಗಬಹುದು ಎನ್ನುವ ಆತಂಕದ ನಡುವೆಯೇ ಇನ್ನಷ್ಟು ಅನಾಹುತ ನಿಯಂತ್ರಿಸಲು ತುರ್ತಾಗಿ ಮಾಜಿ ಪ್ರಧಾನಿ ದೇವೇಗೌಡ ನಿರ್ಧಾರ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಪ್ರಜ್ವಲ್ ರೇವಣ್ಣ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಹುಬ್ಬಳ್ಳಿಯಲ್ಲಿ ನಡೆದಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿದ ಬೆನ್ನಲ್ಲೇ ಕಾಂಗ್ರೆಸ್ ಪ್ರಜ್ವಲ್ ಪ್ರಕರಣದ ಮೂಲಕ ತಿರುಗೇಟು ನೀಡಲು ಮುಂದಾಗಿದೆ. ಈ ಕಾರಣದಿಂದಲೇ ರಾಜಕೀಯವಾಗಿ ಇದು ಪ್ರಬಲಗೊಳ್ಳುವ ಮುನ್ನವೇ ಪ್ರಜ್ವಲ್ ವಿರುದ್ಧ ಕ್ರಮ ಆಗಿದೆ ಎನ್ನುವ ಸಂದೇಶ ನೀಡಲು ಜಾತ್ಯತೀತ ಜನತಾದಳ ಹೆಜ್ಜೆ ಇಟ್ಟಿದೆ.