Site icon newsroomkannada.com

ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟು ಮಾತ್ರ ಮಾಡಿ: ಸಿಎಂ ಪುತ್ರ ಡಾ ಯತೀಂದ್ರ ವಿಡಿಯೊ ವೈರಲ್

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ಮಾಜಿ ಶಾಸಕ ಡಾ.ಯತೀಂದ್ರ ಅವರು ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ತಂದೆ ಸಿದ್ದರಾಮಯ್ಯನವರ ಬೆನ್ನ ಹಿಂದೆ ಆಡಳಿತ ಮಾಡುತ್ತಿರುವವರು ಪುತ್ರ ಯತೀಂದ್ರ, ರಾಜ್ಯದಲ್ಲಿ ವೈಎಸ್​ಟಿ ಕಲೆಕ್ಟ್ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಈ ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.
ಇಂತಹ ಆರೋಪದ ಬೆನ್ನಲ್ಲೇ ಡಾ ಯತೀಂದ್ರ ಅವರು ಮೊಬೈಲ್ ನಲ್ಲಿ ಮಾತನಾಡಿರುವ ವಿಡಿಯೊ ಮಾಧ್ಯಮ ಪ್ರತಿನಿಧಿಗಳ ಕ್ಯಾಮರಾಕ್ಕೆ ಸೆರೆಸಿಕ್ಕಿದ್ದು ಅದು ವಿವಾದವಾಗುವ ಸಾಧ್ಯತೆಯಿದೆ. ಸಾರ್ವಜನಿಕ ಸಭೆಯಲ್ಲಿ ಯತೀಂದ್ರ ಅವರು ತಮ್ಮ ತಂದೆ ಸಿದ್ದರಾಮಯ್ಯ ಜೊತೆ ಮೊಬೈಲ್ ನಲ್ಲಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೊದಲ್ಲಿ ಏನಿದೆ?: ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆ ನಡೆಸುತ್ತಿದ್ದರು. ಆಶ್ರಯ ಸಮಿತಿ ಅಧ್ಯಕ್ಷರಾಗಿರುವ (ಸಾಂವಿಧಾನಿಕ ಹುದ್ದೆ) ಯತೀಂದ್ರ ಅವರು ಜನ ಸಂಪರ್ಕ ಸಭೆ ಎಲ್ಲರ ಮನವಿ ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಸೂಚಿಸಲು ಯತೀಂದ್ರ ಅವರು ಯತ್ನಿಸಿದ್ದಾರೆ.

ಈ ವೇಳೆ ಯತೀಂದ್ರ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸುವುದರ ಮಧ್ಯೆ ದೂರವಾಣಿಯಲ್ಲಿ ಮಾತನಾಡುತ್ತಾ, “ಅಪ್ಪ ಹೇಳಿ” ಎಂದು ಮಾತು ಆರಂಭಿಸಿ ತಾನು ನೀಡಿದ ಲಿಸ್ಟ್​ ಬಗ್ಗೆ ಮಾತನಾಡಿದ್ದಾರೆ. ಆ ಕಡೆಯಿಂದ ವಿವೇಕಾನಂದರ ಹೆಸರು ಎತ್ತಿದ್ದು, ಇದಕ್ಕೆ ಯಾರು ಎಂದು ಯತೀಂದ್ರ ಅವರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ, ಬೇರೊಂದು ಲಿಸ್ಟ್​ ನೀಡಿದ ಬಗ್ಗೆ ಅಸಮಾಧಾನಗೊಂಡ ಯತೀಂದ್ರ ಅವರು, ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹದೇವರಿಗೆ‌ ಫೋನ್ ನೀಡುವಂತೆ ಸೂಚಿಸುತ್ತಾರೆ. ಬಳಿಕ ಮಹದೇವ್ ಜೊತೆ ಮಾತನಾಡಿದ ಯತೀಂದ್ರ, ಮಹದೇವ್​ ಯಾಕೆ ಯಾವ್ದ್ಯಾವುದು ಕೊಡ್ತಾ ಇದ್ದೀರಿ? ಮತ್ತೆ ಇದೆಲ್ಲ ಯಾರು ಕೊಡ್ತಿರೋದು ಅಂತ ಪ್ರಶ್ನೆ ಮಾಡಿದ್ದಾರೆ. ಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟೇ ಮಾತ್ರ ಮಾಡಿ ಅಂತ ಹೇಳುವಂತೆ ಯತೀಂದ್ರ ಅವರು ಮಹದೇವರಿಗೆ ಸೂಚಿಸಿ ಸಹಾಯಕರಿಗೆ ಫೋನ್ ನೀಡುತ್ತಾರೆ. ಯತೀಂದ್ರ ಅವರು ಮಾತನಾಡಿರುವ ವಿಡಿಯೊವನ್ನು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಹಾಕಿ ಸಿಎಂ ಸಿದ್ದರಾಮಯ್ಯನವರನ್ನು ಟೀಕಿಸಿ ಬರೆದಿದ್ದಾರೆ.

Exit mobile version