main logo

‘ದಕ್ಷಿಣ ಕನ್ನಡ ಜಿಲ್ಲೆಗೆ ಬಂಟರ ಕೊಡುಗೆ ಅತ್ಯಮೂಲ್ಯ’: ಸಚಿವ ದಿನೇಶ್ ಗುಂಡೂರಾವ್

‘ದಕ್ಷಿಣ ಕನ್ನಡ ಜಿಲ್ಲೆಗೆ ಬಂಟರ ಕೊಡುಗೆ ಅತ್ಯಮೂಲ್ಯ’: ಸಚಿವ ದಿನೇಶ್ ಗುಂಡೂರಾವ್

ಬಂಟರ ಮಾತೃ ಸಂಘದ ಗಣೇಶೋತ್ಸವದಲ್ಲಿ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ

ಮಂಗಳೂರು: “ಬಂಟರಲ್ಲಿ ನಾಯಕತ್ವದ ಗುಣಗಳಿವೆ. ವೈದ್ಯಕೀಯ ಕ್ಷೇತ್ರ, ಕ್ರೀಡಾ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ, ಹೋಟೆಲ್ ಉದ್ಯಮ ಹೀಗೇ ಎಲ್ಲಾ ಕ್ಷೇತ್ರಗಳಲ್ಲೂ ರಾಜ್ಯ ರಾಷ್ಟ್ರಮಟ್ಟದಲ್ಲಿ ಇಂದು ಬಂಟರು ಗುರುತಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಬಂಟರ ಕೊಡುಗೆ ದೊಡ್ಡದಿದೆ. ಅಂತಹ ನಾಯಕತ್ವ ನಮಗೆ ಅತೀ ಅಗತ್ಯವಾಗಿದೆ. ಬಂಟ ಸಮಾಜದ ಮಹಿಳೆಯರು ಕೂಡ ಸಾಕಷ್ಟು ಪ್ರಬಲರಾಗಿದ್ದಾರೆ, ಇತರರಿಗೆ ಮಾದರಿಯಾಗಿ ಬೆಳೆದಿದ್ದಾರೆ. ಬಂಟರು ಇನ್ನು ಮುಂದೆಯೂ ಸಾಮಾಜಿಕವಾಗಿ ಹೆಚ್ಚೆಚ್ಚು ಪ್ರಬಲರಾಗಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಮಾಜದಲ್ಲಿ ಒಗ್ಗಟ್ಟನ್ನು ಉಳಿಸಿ ಅಭಿವೃದ್ಧಿಗೆ ಕೊಡುಗೆ ಕೊಡಿ. ವಿಘ್ನ ನಿವಾರಕ ಗಣೇಶನ ಆಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲಿರಲಿ” ಎಂದು ಅರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ‌ ನಗರದಲ್ಲಿ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಮಾತಾಡಿದರು.

ಬಳಿಕ ಸಭೆಯನ್ನುದ್ದೇಶಿಸಿ ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು, “ಜಗತ್ತಿನಲ್ಲಿ ಮೊದಲನೇ ಪೂಜೆ ಸಲ್ಲುವುದು ಗಣೇಶನಿಗೆ. ಅದೇ ಗಣೇಶನ ಉತ್ಸವದ ನಿಮಿತ್ತ ನಾವಿಂದು ಜೊತೆ ಸೇರಿದ್ದೇವೆ. ಬಂಟರು, ನಾಡವರು ಅಂದರೆ ಶಕ್ತಿವಂತರು. ಇದೇ ಕಾರಣಕ್ಕೆ ಎಂಟೆದೆಯ ಬಂಟ ಎನ್ನುತ್ತಾರೆ. ಒಬ್ಬ ಬಂಟ ನಮ್ಮ ಬಳಗದಲ್ಲಿ ಇದ್ದರೆ ನಮಗೆ ಎಲ್ಲಿಲ್ಲದ ಧೈರ್ಯ. ನಾಯಕತ್ವ ಗುಣಗಳಿಗೆ ಹೆಸರಾದ ಬಂಟರು ಇದೇ ರೀತಿ ಸಮಾಜದಲ್ಲಿ ಎಲ್ಲಾ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ತರುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರಲಿ” ಎಂದರು.

ಮಾತು ಮುಂದುವರಿಸಿದ ಹೇರಂಭ ಇಂಡಸ್ಟ್ರಿಸ್ ಆಡಳಿತ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ ಅವರು, “ಶಿಕ್ಷಣ ಇಂದು ಅತೀ ಅವಶ್ಯವಾಗಿದೆ. ನಾನು ಕೂಡ ಬಂಟರ ಸಂಘದ ನೆರವಿನಿಂದ ಶಿಕ್ಷಣ ಪಡೆದು ಈ ಮಟ್ಟಕ್ಕೆ ಏರಿದ್ದೇನೆ. ಶಿಕ್ಷಣದ ಮಹತ್ವವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಶಿಕ್ಷಣದಿಂದ ಪ್ರಗತಿ ಸಾಧ್ಯ” ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆರೋಗ್ಯ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಹೇರಂಭ ಇಂಡಸ್ಟ್ರಿಸ್ ಮುಂಬೈ ಇದರ ಆಡಳಿತ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬ್ಯಾಂಕ್ ಆಫ್ ಬರೋಡ ಝೋನಲ್ ಹೆಡ್ ಗಾಯತ್ರಿ ಆರ್., ಮುಂಬೈ ಉದ್ಯಮಿ ಕೆ.ಕೆ. ಶೆಟ್ಟಿ ಕಾಸರಗೋಡು, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಮುರಳೀಧರ ಹೆಗ್ಡೆ, ಮೊಗವೀರ ಮಹಾಸಭಾ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಸುವರ್ಣ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಲಯನ್ಸ್ ಗವರ್ನರ್ ಮೆಲ್ವಿನ್ ಡಿಸೋಜ, ದ.ಕ. ಜಿಲ್ಲಾ ಸಂಚಾಲಕ ಬಿ.ನಾಗರಾಜ್ ಶೆಟ್ಟಿ, ಕಾಸರಗೋಡು ಜಿಲ್ಲಾ ಸಂಚಾಲಕ ಸಂಜೀವ ಶೆಟ್ಟಿ, ಬಂಟರ ಮಾತೃ ಸಂಘದ ಪ್ರದಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ, ಕೋಶಾಧಿಕಾರಿ ಸಿ.ಎ. ರಾಮ ಮೋಹನ್ ರೈ, ಸಂಜೀವ ಶೆಟ್ಟಿ ಸಂಪಿಗೆ ಅಡಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದ ಸಾಧಕಿ ಡಾ. ಅಮೃತ ಭಂಡಾರಿ, ಕಂಬಳ ಕ್ಷೇತ್ರದ ಸಾಧಕ ಕೊಳಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ, ಕೈಗಾರಿಕಾ ಕ್ಷೇತ್ರದ ಸಾಧಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರನ್ನು ಅತಿಥಿಗಳು ಸನ್ಮಾನಿಸಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮಾನಾಥ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಆಶಾಜ್ಯೋತಿ ರೈ ವಂದಿಸಿದರು. ಮಂಜುಳಾ ಶೆಟ್ಟಿ ,ಪ್ರಕಾಶ್ ಮೆಲಾಂಟ ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

error: Content is protected !!