ಬೆಂಗಳೂರು: ವಿಟ್ಲದಲ್ಲಿ ದಲಿತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕಮಲಾಕ್ಷ, ಅಕ್ಷಯ್, ಸುಕುಮಾರ್ , ರಾಜಾ ಎಂಬುವರು ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದು ತಿಳಿದುಬಂದಿದೆ.
ದಲಿತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದು, ಜೊತೆಗೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈ ಪ್ರಕರಣವನ್ನು ಮಂಗಳೂರು ಫೈಲ್ಸ್ ಎಂದು ಟ್ವೀಟ್ ಮಾಡಿ ಹೇಳಿದ್ದಾರೆ.
ವಿಷಯಕ್ಕೆ ಸಂಬಂಧಿಸಿ ಬಂಟ್ವಾಳದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ರಮಾನಾಥ ರೈ, ಘಟನೆಯನ್ನು ಖಂಡಿಸಿದ್ದು, ಈ ಕುರಿತು ಬಿಜೆಪಿ ಪಕ್ಷದ ನಾಯಕರೂ ಪ್ರತಿಕ್ರಿಯೆ ನೀಡಬೇಕು, ದಲಿತ ಬಾಲಕಿಯ ಪರ ಧ್ವನಿ ಎತ್ತಬೇಕು ಎಂದಿದ್ದಾರೆ. ಇನ್ನು ಬಿಜೆಪಿಯ ನಿರ್ಗಮಿತ ಅಧ್ಯಕ್ಷ ಕಟೀಲ್ ಉಡುಪಿ ಪ್ರಕರಣವನ್ನು ಕೇರಳ ಫೈಲ್ಸ್‌ಗೆ ಹೋಲಿಸಿದ್ದಾರೆ. ಹಾಗಾದರೆ ಇವರದ್ದೇ ಕ್ಷೇತ್ರದ ವಿಟ್ಲದಲ್ಲಿ ನಡೆದಿರುವ ನಿರಂತರ ಅತ್ಯಾಚಾರ ಯಾವ ಫೈಲ್ಸ್? ಇದನ್ನು ಮಂಗಳೂರು ಫೈಲ್ಸ್ ಎಂದು ಕರೆಯಬಹುದೆ? ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.
ಉಡುಪಿ ಪ್ರಕರಣವನ್ನು ರಾದ್ಧಾಂತ ಮಾಡಿದ ಬಿಜೆಪಿಯವರು, ವಿಟ್ಲದಲ್ಲಿ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರದ ಬಗ್ಗೆ ಯಾಕೆ ಬಾಯಿ ಬಿಡುತ್ತಿಲ್ಲ? ಆರೋಪಿಗಳು ಇವರ ಸಂಘಟನೆಗೆ ಸೇರಿದವರು ಎನ್ನುವ ಕಾರಣಕ್ಕಾಗಿ ಮೌನವೇ? ಬಿಜೆಪಿಯವರ ಪ್ರಕಾರ ಅಪರಾಧಿಗಳ ಧರ್ಮದ ಆಧಾರದ ಮೇಲೆ ಆ ಪ್ರಕರಣದ ತೀವ್ರತೆ ಮತ್ತು ಗುರುತ್ವ ನಿರ್ಧಾರವಾಗುತ್ತದೆಯೇ? ಎಂದು ದಿನೇಶ್ ಗುಂಡೂರಾವ್ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ, ಇದು ತೀವ್ರ ಚರ್ಚೆಗೆ ಕಾರಣವಾಗಿದೆ.