ಮಂಗಳೂರು: ಬಜರಂಗದಳ ಕಾರ್ಯಕರ್ತರ ಮೇಲೆ ಅನೇಕ ಪ್ರಕರಣಗಳಿವೆ. ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು ಬಿಜೆಪಿಯವರು ಇಂತಹ ವ್ಯಕ್ತಿಗಳ ಮೇಲೆ ಅನುಕಂಪ ತೋರುತ್ತಾರೆ ಎಂದರೆ ಅದಕ್ಕಿಂತ ಕೆಟ್ಟ ಸಂಗತಿ ಬೇರೇನಿದೆ ಎಂದು ಪ್ರಶ್ನಿಸಿದರು.
ಪ್ರತಿ ವಿಚಾರಕ್ಕೂ ಧರ್ಮ, ರಾಜಕೀಯದ ಬಣ್ಣ ಬೆರಸಬೇಡಿ ಪೊಲೀಸರಿಗೆ ಕೆಲಸ ಮಾಡಲು ಅವಕಾಶ ನೀಡಿ ಎಂದ ಸಚಿವರು, ನಮ್ಮ ಪೊಲೀಸರಿಗೆ ತಪ್ಪು ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ. ಇದೇ ರೀತಿಯ ಅಪರಾಧ ಹಿನ್ನಲೆಯ 65 ಜನರನ್ನು ಈಗಾಗಲೇ ದ.ಕ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ನಾವು ಹಸ್ತಕ್ಷೇಪ ಮಾಡುತ್ತಿಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ ಡ್ರಗ್ ಮಾಫಿಯಾ, ನೈತಿಕ ಪೊಲೀಸ್ ಗಿರಿ ವಿರುದ್ದ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ನಾಯಕರು ಶಾಂತಿಯ ವಾತಾವರಣ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.