ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಹಂತೂರಿನಲ್ಲಿ ಹೊಯ್ಸಳರ ದೊರೆ ಬಿಟ್ಟಿದೇವ ( ವಿಷ್ಣುವರ್ಧನ್) ನ ಪುತ್ರಿ ಹಿರಿಯಬ್ಬರಸಿ ನಿರ್ಮಿಸಿದ್ಧ ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಬಸದಿ ಪುನರ್ ನಿರ್ಮಾಣ ಪೂರ್ತಿಗೊಂಡು ವೈಭವದ ಧಾಮಸಂಪ್ರೋಕ್ಷಣಾ ಕಾರ್ಯಕ್ರಮದಲ್ಲಿ ಹಿಂದೂ ಮತ್ತು ಜೈನರು ಜೊತೆಗೂಡಿ ಮಹಾವೈಭವಕ್ಕೆ ಸಾಕ್ಷಿಯಾದರು.
ಅದು ಮಲೆನಾಡು ಪ್ರದೇಶದ ಮೂಡಿಗೆರೆ ತಾಲ್ಲೂಕಿನ ಹೊಯ್ಸಳ ಸಾಮ್ರಾಜ್ಯದ ಸ್ಥಾಪಕ ಸಳ ದೊರೆಯ ಹುಟ್ಟೂರು ಅಂಗಡಿ ಗ್ರಾಮದ ಒಂದು ಭಾಗವೇ ಹಂತೂರು. ಇಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನ ಪುತ್ರಿ ಹಿರಿಯಬ್ಬರಸಿ ವೈಭವದ ಬಸದಿ ಕಟ್ಟಿಸಿದಳು. ಒಂದು ಕಾಲದಲ್ಲಿ ಇಲ್ಲಿ ಜೈನರೇ ಬಹುಸಂಖ್ಯಾತರಾಗಿದ್ದರು. ಅನ್ಯ ಧರ್ಮೀಯರಿಂದಾದ ಬಲವಂತದ ಮತಾಂತರ, ಜೈನರ ವಲಸೆ, ಅನ್ಯ ಮತಪಂಗಡಗಳ ಆಕರ್ಷಣೆಗೆ ಒಳಗಾಗಿ ಸ್ವ ಇಚ್ಛೆಯಿಂದಾದ ಮತಾಂತರ ಮುಂತಾದ ಹಲವು ಕಾರಣಗಳಿಂದ ಇಂದು ಜೈನರೇ ಇಲ್ಲದ ಪರಿಸ್ಥಿತಿ ಹಂತೂರಿನಲ್ಲಿ ನಿರ್ಮಾಣವಾಯಿತು. ಈಗಲೂ ಜೈನರ ಮನೆಯೇ ಹಂತೂರಿನಲ್ಲಿ ಇಲ್ಲ. ಆದರೆ ಒಕ್ಕಲಿಗರೇ ಬಹುಸಂಖ್ಯಾತರಾಗಿರುವ ಹಂತೂರಿನಲ್ಲಿ ಜೈನ ಬಸದಿಯನ್ನು ಪುನರ್ ನಿರ್ಮಿಸಬೇಕೆಂದು ಹಂತೂರಿನ ಸದ್ಧರ್ಮ ಬಂಧುಗಳು ನಿರ್ಧರಿಸಿದರು.
ಹಂತೂರಿನ ನಾಗರೀಕರು ಸಭೆ ಸೇರಿದರು. ಇದು ಜೈನರ ಆರಾಧ್ಯ ಕೇಂದ್ರವಾದುದರಿಂದ ಜೈನರನ್ನೇ ಮುಂದಿಟ್ಟುಕೊಂಡು ಮುಂದುವರೆಯೋಣ ಎಂದು ನಿರ್ಧರಿಸಿ ಸಮೀಪದ ಕಳಸದ ಜೈನ ಸಮಾಜದ ಸಹಕಾರ ಹಾಗೂ ಎನ್ ಆರ್ ಪುರ ಜೈನ ಮಠದ ಪೂಜ್ಯ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದುಕೊಂಡು, ಧರ್ಮಸ್ಥಳ ಖಾವಂದರ ಒಪ್ಪಿಗೆ ಪಡೆದು ಹಂತೂರಿನ ಗ್ರಾಮಸ್ಥರು ಬಸದಿ ನಿರ್ಮಾಣದಲ್ಲಿ ಕಾರ್ಯೋನ್ಮುಖರಾದರು. ಶಿಲಾಮಯ ಬಸದಿ ಅತ್ಯಂತ ಸುಂದರವಾಗಿ ರೂಪುಗೊಂಡು ಧರೆಗತಿಶಯವಾದ ಅನುಪವಾದ ಜಿನಮಂದಿರ ಮೇಲೆದ್ದು ನಿಂತಿತು. ಜೈನರು ಮತ್ತು ಹಿಂದೂಗಳು ಜೊತೆಯಾಗಿ ಧಾಮಸಂಪ್ರೋಕ್ಷಣಾ ಕಾರ್ಯಕ್ರಮ ನಡೆಸಲು ಟೊಂಕಕಟ್ಟಿ ನಿಂತರು. 22.03.2024 – 24.03.2024 ರ ವರೆಗೆ ಧಾಮಸಂಪ್ರೋಕ್ಷಣಾ ಕಾರ್ಯಕ್ರಮ ಜರಗಿತು.
ಹಿಂದೂಗಳು ಮತ್ತು ಜೈನರು ಜೊತೆಯಾಗಿ ಪೂಜೆಗೈದರು, ಅಭಿಷೇಕ ಮಾಡಿದರು, ಧಾರ್ಮಿಕ ಸಭಾ ಕಾರ್ಯಕ್ರಮಗಳ ನಿರ್ವಹಣೆ ಮಾಡಿದರು. ಮತ್ತೊಂದು ವಿಶೇಷವೆಂದರೆ ಜೈನರಲ್ಲಿ ದಿಗಂಬರರ ಜೊತೆ ಶ್ವೇತಾಂಬರರು ಕೂಡ ಜೊತೆಯಾದರು. ಹಿಂದೂಗಳು ಹಾಗೂ ಜೈನರು ಹೆಗಲಿಗೆ ಕೈ ಹಾಕಿ ತಮಾಷೆ ಮಾಡಿಕೊಂಡರು. ಪರಸ್ಪರರ ಕಿಚಾಯಿಸಿದರು, ಹಾಸ್ಯ ಚಟಾಕಿ ಹಾರಿಸಿದರು. ಕಲಶಗಳ ಹರಾಜಿಗೆ ನಿಂತರು, ಧಾರ್ಮಿಕ ಕಾರ್ಯಕ್ರಮದ ಸರದಿ ಬಂದಾಗ ಅಷ್ಟೇ ಶೃದ್ಧಾವಂತರಾಗಿ ನಿಯಮದ ಪಾಲನೆ ಮಾಡುತ್ತ ಶುಚಿಯಾಗಿ ಜೊತೆಯಾಗಿ ಶೃದ್ಧಾ ಭಕ್ತಿಯಿಂದ ಪಾಲ್ಗೊಂಡರು. ಸ್ವಾಮೀಜಿಗಳ ಸಲಹೆ ಮಾರ್ಗದರ್ಶನದಂತೆ ನಡೆದುಕೊಂಡರು. ಪುಟ್ಟ ಭಾರತವೇ ಹಂತೂರಿನಲ್ಲಿ ಮೈದಳೆಯಿತು. ಮತ್ತೊಂದು ವಿಶೇಷವೆಂದರೆ ಹಿಂದೂ ಬಾಂಧವರಲ್ಲಿ ಅನೇಕರು ಈ ಬಸದಿಯ ಕಾರ್ಯಕ್ರಮಕ್ಕಾಗಿಯೇ ಮದ್ಯ ಮಾಂಸದಿಂದ ದೂರವಿದ್ದರು. ಮುಂದೆಯೂ ಹಂತೂರು ಜೈನರ ಹಾಗೂ ಹಿಂದೂಗಳ ಶೃದ್ಧಾ ಕೇಂದ್ರವಾಗಿ ಮುಂದುವರೆಯಲಿದೆ. ಈ ಕಾರ್ಯಕ್ರಮ ನೋಡುತ್ತಿದ್ದಂತೆ ನನಗೆ ನೆನಪಾದದ್ದು ತುಳುನಾಡಿನ ಭವ್ಯ ಇತಿಹಾಸ.
ತುಳುನಾಡಿನಲ್ಲಿ ಅರಸೊತ್ತಿಗೆಯ ಕಾಲದಿಂದಲೂ ಹಿಂದೂಗಳು ಮತ್ತು ಜೈನರು ಒಂದಾಗಿಯೇ ಬದುಕುತ್ತಿದ್ದಾರೆ. ತುಳುನಾಡಿನ ಅನೇಕ ಭವ್ಯವಾದ ಹಿಂದೂ ದೇವಸ್ಥಾನಗಳು ಜೈನರಿಂದಲೇ ನಿರ್ಮಾಣಗೊಂಡಿದೆ. ಹಾಗೂ ಇದಕ್ಕಾಗಿ ಅನೇಕ ಜೈನ ಬಾಂಧವರು ದೇವಸ್ಥಾನಗಳಿಗಾಗಿ ತನು ಮನ ಧನವನ್ನು ಧಾರೆಯೆರೆದಿದ್ದಾರೆ. ಸಾವಿರಾರು ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ. ದೇವಸ್ಥಾನಗಳ ನಿರ್ಮಾಣಕ್ಕಾಗಿಯೇ ಆಸ್ತಿಗಳನ್ನು, ಬೆಳ್ಳಿ ಬಂಗಾರಗಳನ್ನು ಮಾರಿದ್ದಾರೆ. ಬಸದಿಗಳಿಗಿಂತಲೂ ದೇವಾಲಯದ ಕಡೆ ಹೆಚ್ಚು ಶೃದ್ಧೆಯನ್ನು ಇರಿಸಿಕೊಂಡಿರುವ ಅನೇಕ ಜೈನರನ್ನು ಈಗಲೂ ಕಾಣಬಹುದು. ಇದು ನಿಜವಾದ ಸಾಮರಸ್ಯ ಅಥವಾ ಕೋಮು ಸೌಹಾರ್ದತೆ. ಈ ನಿಟ್ಟಿನಲ್ಲಿ ಹಿಂದೂಗಳನ್ನು ಮತ್ತು ಜೈನರನ್ನು ಇತರರು ನೋಡಿ ಕಲಿಯಬೇಕಿದೆ.
ಏನೇ ಇರಲಿ, ಈ ಕಾಲಘಟ್ಟದಲ್ಲಿ ಕೋಮು ಸಾಮರಸ್ಯದಿಂದ ನಲುಗುತ್ತಿರುವ ಸಮಾಜದಲ್ಲಿ ಹಂತೂರಿನಂತಹ ಹಳ್ಳಿಯಲ್ಲಿ ಹಿಂದೂಗಳು ಹಾಗೂ ಜೈನರು ತೋರಿದ ಸಮನ್ವಯತೆ ಮಾದರಿಯಾಗಿತ್ತು. ಈ ಸಾಮರಸ್ಯ ಮುಂದೆಯೂ ಅನುರಣಿಸಲಿ. ಸಕಲ ಜೀವಿಗಳಿಗೆ ಒಳಿತಿಗಾಗಿ ನಡೆದ ಈ ಕಾರ್ಯಕ್ರಮ ಪ್ರಪಂಚದ ತುಂಬಾ ಕಡೆ ಪಸರಿಸಲಿ.
ಲೇಖನ : ನಿರಂಜನ್ ಜೈನ್ ಕುದ್ಯಾಡಿ