ಬಂಟ್ವಾಳ: ಇಂದು ನಾಡಿನೆಲ್ಲೆಡೆ ಈದ್-ಮಿಲಾದ್ ಸಂಭ್ರಮ ಮನೆಮಾಡಿದೆ. ಪ್ರವಾದಿ ಮಹಮ್ಮದ್ ಅವರ ಜನ್ಮದಿನವನ್ನು ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.
ಈ ನಡುವೆ, ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಬೇಂಕ್ಯದಲ್ಲಿ ಈದ್ ಮಿಲಾದ್ ಸಂಭ್ರಮದ ಮೆರವಣಿಗೆ ಸಾಗಿ ಬಂದ ಸಂದರ್ಭದಲ್ಲಿ ಸಜೀಪ ಮೂಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿರುವ ದೇವಿ ಪ್ರಸಾದ್ ಪೂಂಜ (ಶೋಭಿತ್ ಪೂಂಜ) ಅವರು ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ಸಿಹಿ ವಿತರಿಸಿ ಗಮನಸೆಳೆದಿದ್ದಾರೆ ಮತ್ತು ಈ ಮೂಲಕ ಕೋಮು ಸಾಮರಸ್ಯಕ್ಕೊಂದು ಹೊಸ ಭಾಷ್ಯ ಬರೆದಿದ್ದಾರೆ.
ಈ ಸಂದರ್ಭದಲ್ಲಿ ಸಜೀಪಮೂಡ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸಿದ್ದಿಕ್, ಚೆನ್ನಪ್ಪ ಪೂಜಾರಿ ಯೋಗಿಶ್ ಸಾಲ್ಯಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ದೇವಿ ಪ್ರಸಾದ್ ಪೂಂಜ ಅವರು ಪ್ರತೀ ವರ್ಷವೂ ಈದ್ ಮಿಲಾದ್ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿಗೆ ಸಿಹಿ ಹಂಚುವ ಮೂಲಕ ಈ ಭಾಗದಲ್ಲಿ ಹಿಂದು-ಮುಸ್ಲಿಂ ಸೌಹಾರ್ದಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಮಾದರಿ ಜನಪ್ರತಿನಿಧಿ ಎಣಿಸಿಕೊಂಡಿದ್ದಾರೆ.