ಉಳ್ಳಾಲ, ಅ.2: ಗಾಂಧಿ ಜಯಂತಿ ಹಿನ್ನೆಲೆ ನಗರದಲ್ಲಿ ಮದ್ಯ ಮಾರಾಟ ನಿಷೇಧವಿದ್ದರೂ ತೊಕ್ಕೊಟ್ಟಿನ ಬಾರಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಸಲಾಗಿದ್ದು ಕ್ವಾಟ್ರಿಗೆ 40 ರೂಪಾಯಿ ಹೆಚ್ಚುವರಿ ವಸೂಲಿ ಮಾಡಿದರು.
ಹೆಚ್ಚುವರಿ ಹಣ ದೋಚುತ್ತಿರುವುದರ ವಿರುದ್ಧ ಆಕ್ರೋಶಗೊಂಡ ಪಾನ ಪ್ರಿಯರೋರ್ವರು ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನ ವೀಡಿಯೋ ಮಾಡಿದ್ದಾರೆ. ವಿನಮ್ರ ಬಾರ್ ನಲ್ಲಿ ಬೆಳ್ಳಂಬೆಳಗ್ಗೆಯೇ ಕುಡಿದು ತೂರಾಡುವುದು ಸಾಮಾನ್ಯ ಎನ್ನುವಂಥ ಸ್ಥಿತಿಯಿದೆ. ಬಾರ್ ಬೆಳಗ್ಗೆ 10 ಗಂಟೆ ನಂತರವೇ ತೆರೆಯಬೇಕೆಂದು ಅಬಕಾರಿ ಇಲಾಖೆ ನಿಯಮ ಇದ್ದರೂ ಈ ಬಾರಲ್ಲಿ ಮಾತ್ರ ಬೆಳಗ್ಗೆ 8 ಗಂಟೆಯಿಂದಲೇ ಮದ್ಯ ದೊರೆಯುತ್ತದೆ. ಅದಕ್ಕಾಗಿ ಹಗಲು ಕುಡುಕರಲ್ಲಿ ಬಾರ್ ನಲ್ಲಿ ಹೆಚ್ಚುವರಿ ದರವನ್ನು ಪೀಕಿಸುತ್ತಾರೆಂಬ ಆರೋಪ ಇದೆ. ಇಲ್ಲಿ ಬೆಳಗ್ಗೆಯೇ ಕುಡಿದು ಟೈಟಾಗುವ ಯುವಕರು ಬಾರ್ ಎದುರಲ್ಲೇ ಟೆಂಟ್ ಹಾಕಿ ಲೂಡೊ ಆಡುತ್ತಾರೆ. ನಿತ್ಯವೂ ಬೆಳ್ಳಂಬೆಳಗ್ಗೆ ಎಣ್ಣೆ ಕುಡಿಸುವ ಬಾರ್ ಮಹಾತ್ಮನ ಜನ್ಮ ದಿನಾಚರಣೆಯಂದು ಎಣ್ಣೆ ಪ್ರಿಯರಿಂದಲೇ ಡಬಲ್ ವಸೂಲಿ ಮಾಡಿ ಮದ್ಯ ನಿಷೇಧ ನಿಯಮವನ್ನೇ ಗಾಳಿಗೆ ತೂರಿದ್ದಾರೆ.