ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಜಿಲ್ಲೆಯಾದ್ಯಂತ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ವಿಕೋಪಗಳು ಸಂಭವಿಸುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಈ ಬಗ್ಗೆ ಸೂಕ್ತ ರಕ್ಷಣಾ ಕಾರ್ಯಾಚರಣೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಜಿಲ್ಲಾಡಳಿತದ ಕರ್ತವ್ಯವಾಗಿರುತ್ತದೆ.
ಜಿಲ್ಲೆಯ ರಸ್ತೆಯ ಬದಿಗಳಲ್ಲಿ ಅಳವಡಿಸಲಾಗಿರುವ ಜಾಹೀರಾತು ಫಲಕಗಳು ಗಾಳಿ ಮಳೆಯ ಪರಿಣಾಮದಿಂದಾಗಿ ರಸ್ತೆಗೆ ಬಿದ್ದು ಅಪಘಾತ, ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ರಸ್ತೆಯ ಬದಿಗಳಲ್ಲಿ ಅಪಾಯಕಾರಿ ಜಾಹೀರಾತು ಫಲಕ, ಪ್ಲೆಕ್ಸ್ ಗಳ (ಆಧಿಕೃತ ಅನಧಿಕೃತ) ಬಗ್ಗೆ ಸಮೀಕ್ಷೆ ನಡೆಸಿ ಅಪಾಯಕಾರಿಯಾಗಿ ಕಂಡುಬರುವ ಜಾಹೀರಾತು ಫಲಕಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ತೆರವುಗೊಳಿಸುವಂತೆ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.