ಮಂಗಳೂರು: ಸೊಸೈಟಿ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ರಾಯಲ್ ಟ್ರಾವಂಕೂರ್ ಹೆಸರಿನ ಹಣಕಾಸು ಸಂಸ್ಥೆಯಲ್ಲಿ ಠೇವಣಿದಾರರಿಗೆ ವಂಚನೆ ಆಗಿರುವ ಆರೋಪ ಕೇಳಿಬಂದಿದೆ.
ಇಲ್ಲಿ ಹೂಡಿಕೆ ಮಾಡಿ ಹಣ ಕಳಕೊಂಡ ಗ್ರಾಹಕರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಸಂಸ್ಥೆ ಸರಿಯಾಗಿ ಒಂದು ವರ್ಷದ ಹಿಂದೆ ಮಂಗಳೂರಿನಲ್ಲಿ ಹೊಸ ಕಚೇರಿ ಆರಂಭಗೊಂಡಿತ್ತು. ಮಂಗಳೂರಿನಲ್ಲಿ ಪ್ರತಿ ದಿನ ಪಿಗ್ನಿ ಕಲೆಕ್ಷನ್ ಆಗುತ್ತಿದ್ದರಿಂದ ಹೆಚ್ಚಾಗಿ ಅಂಗಡಿ, ವ್ಯಾಪಾರಸ್ಥರೇ ಇದರ ಗ್ರಾಹಕರಾಗಿದ್ದರು. ಹಂಪನಕಟ್ಟೆಯ ದುಬೈ ಮಾರ್ಕೆಟ್ ನಲ್ಲಿ ಮೊಬೈಲ್ ಅಂಗಡಿ ಹೊಂದಿರುವ ಅಬ್ದುಲ್ ಅಜೀಜ್ ಎಂಬವರು 70 ಸಾವಿರ ಕಳಕೊಂಡಿದ್ದು, ಆಯುಕ್ತರಿಗೆ ದೂರು ನೀಡಲು ಹೋದವರಲ್ಲಿ ಒಬ್ಬರು. ಅವರು ಹೇಳುವ ಪ್ರಕಾರ, ಹಂಪನಕಟ್ಟೆಯಲ್ಲೇ 100ಕ್ಕೂ ಹೆಚ್ಚು ಗ್ರಾಹಕರಿದ್ದು, ದಿನವೂ ಒಂದಷ್ಟು ದುಡ್ಡು ಉಳಿತಾಯ ಆಗಲಿ ಎಂದು ಪಿಲ್ಮೀ ಕಟ್ಟುತ್ತಿದ್ದರು. ಆದರೆ ವಾರದ ಹಿಂದೆ ಕಲೆಕ್ಷನ್ ಆದ ಮೊತ್ತದಲ್ಲಿ ಹಣವನ್ನು ತೆಗೆಯೋಣ ಎಂದಾಗ, ಸಂಸ್ಥೆಯಲ್ಲಿ ಹಣ ಇಲ್ಲ ಎಂಬ ಮಾಹಿತಿ ಬಂದಿತ್ತು. ಪಿವಿಎಸ್ ನಲ್ಲಿರುವ ಕಚೇರಿಗೆ ತೆರಳಿ ನೋಡಿದಾಗ, ಮೇಲಿನಿಂದಲೇ ಹಣ ಇಲ್ಲ ಎಂದು ಸೂಚನೆ ಬಂದಿದೆ ಎನ್ನುವ ಮಾಹಿತಿಯನ್ನು ಸಿಬಂದಿ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಸಮಸ್ಯೆ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಹೀಗಾಗಿ ಪೊಲೀಸ್ ದೂರು ನೀಡಲು ಬಂದಿಲ್ಲ. ಹಲವಾರು ಮಂದಿ 40-50 ಸಾವಿರ ಅಂತ ಹಣ ಕಳಕೊಂಡಿದ್ದಾರೆ ಎಂದು ಅಬ್ದುಲ್ ಅಜೀಜ್ ತಿಳಿಸಿದ್ದಾರೆ.